ಯಲ್ಲಾಪುರ: ತೊಟ್ಟಿಲಗುಂಡಿಯಿoದ ಹೊಳೆನಂದಿಕಟ್ಟಾವರೆಗಿನ ಮೂರು ಕಿಮೀ ರಸ್ತೆ ಅಂಚಿನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡಗಳಿಗೂ ಅರಣ್ಯ ಇಲಾಖೆ ಖರ್ಚು ಹಾಕಿದೆ. ಪ್ರತಿ ಗಿಡ ನಾಟಿಗೆ 1197 ರೂ ವೆಚ್ಚ ಮಾಡಿರುವುದಾಗಿ ದಾಖಲೆ ಸೃಷ್ಠಿಸಿ ಸರ್ಕಾರಿ ಬೊಕ್ಕಸಕ್ಕೆ 10.78 ಲಕ್ಷ ರೂಪಾಯಿ ವಂಚಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆ ಹಾಗೂ ಕ್ಷೇತ್ರ ಅಧ್ಯಯನದಿಂದ ಈ ಸತ್ಯ ಹೊರಬಿದ್ದಿದೆ.
ಸರ್ಕಾರಿ ದಾಖಲೆಗಳ ಪ್ರಕಾರ ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ತೊಟ್ಟಿಲಗುಂಡಿಯಿoದ ಹೊಳೆನಂದಿಕಟ್ಟಾವರೆಗೆ ರಸ್ತೆ ಬದಿ ನಡುತೋಪು ನಿರ್ಮಾಣ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆ ಅಡಿ 3 ಕಿ.ಮೀ ಉದ್ದದ ಪ್ರದೇಶದಲ್ಲಿ 900 ಗಿಡಗಳನ್ನು ನೆಡಲಾಗಿದೆ. ಸಾಮಾನ್ಯವಾಗಿ 100ರೂ ಒಳಗೆ ಪ್ರತಿ ಗಿಡ ನಾಟಿ ಕೆಲಸ ಮುಗಿಯಲಿದ್ದು, ಇಲ್ಲಿ ಪ್ರತಿ ಗಿಡಕ್ಕೆ 10 ಪೆಟ್ಟು ಹೆಚ್ಚಿನ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪ್ರತಿ ಗಿಡ ನೆಡಲು 1197ರೂಪಾಯಿ ದರದಲ್ಲಿ 900 ಗಿಡ ನೆಟ್ಟಿರುವುದಾಗಿ ಬಿಂಬಿಸಿ ಒಟ್ಟು 1078000ರೂ ವೆಚ್ಚ ಕಾಣಿಸಲಾಗಿದೆ. ಆದರೆ, ಕ್ಷೇತ್ರದಲ್ಲಿ ಯೋಜನೆ ಅಡಿ ನೆಡಲಾದ 250 ಗಿಡಗಳು ಸಹ ಇಲ್ಲ.
ಗಿಡ ಸಾವನಪ್ಪಿರಬಹುದು ಎಂದು ಅಂದಾಜಿಸಿ ಹುಡುಕಾಟ ನಡೆಸಿದರೆ ಗುಂಡಿ ತೋಡಿದ ಕುರುಹುಗಳು ಸಹ ಅಲ್ಲಿಲ್ಲ. ರಸ್ತೆ ಅಂಚಿನ ಖಾಸಗಿ ಭೂಮಿಗೆ ಹೊಂದಿಕೊoಡು `ಗೊಬ್ಬರ ಗಿಡ’ ಬೆಳೆದಿದೆ. ದಾಖಲೆ ಸೃಷ್ಠಿಸುವುದಕ್ಕಾಗಿ ಎಲ್ಲಿಯೋ ಇದ್ದ ನರೆಗಾ ಬೋರ್ಡನ್ನು ಎರಡು ದಿನದ ಮಟ್ಟಿಗೆ ಕ್ಷೇತ್ರದಲ್ಲಿರಿಸಲಾಗಿದ್ದು, ಹುಗಿದ ಬೋರ್ಡನ್ನು ಕಿತ್ತು ಮರದ ಬುಡಕ್ಕೆ ನಿಲ್ಲಿಸಿರುವುದಕ್ಕೆ ಬೋರ್ಡಿನ ತಳಭಾಗದಲ್ಲಿನ ಮಣ್ಣು ಸಾಕ್ಷಿ ಹೇಳುತ್ತಿದೆ. ಅವ್ಯವಹಾರ ಬೆಳಕಿಗೆ ಬಾರಬಾರದು ಎಂಬ ಕಾರಣಕ್ಕೆ ಆ ಬೋರ್ಡನ್ನು ಸಹ ನಂತರ ನಾಪತ್ತೆ ಮಾಡಲಾಗಿದೆ.
ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಅಡಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಿರವತ್ತಿ ಗ್ರಾಮ ಪಂಚಾಯತ, ಯಲ್ಲಾಪುರ ತಾಲೂಕು ಪಂಚಾಯತ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಅಧಿಕಾರಿಗಳು ಯೋಜನೆಗೆ ಅನುಮೋದನೆ ನೀಡಿದ್ದಾರೆ. ಕೂಲಿ ಕೆಲಸಕ್ಕಾಗಿ 654677ರೂ ಹಾಗೂ ಸಾಮಗ್ರಿ ವೆಚ್ಚಕ್ಕಾಗಿ 423323ರೂ ಹಣವನ್ನು ಖರ್ಚು ಮಾಡಲಾಗಿದೆ. ಈ ಹಗರಣಕ್ಕಾಗಿ ಬಡ ಕೂಲಿ ಕಾರ್ಮಿಕರಿಗೆ ಆಮೀಷ ಒಡ್ಡಿ ಅವರ ಜಾಬ್ ಕಾರ್ಡ ಹಾಗೂ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
ಅಲ್ಲಿಯೂ ಕೆಲಸ.. ಇಲ್ಲಿಯೂ ಹಾಜರಿ!
ಕೊಕರೆ, ಎಡಗೆ, ಪಟಕಾರೆ, ದೊಯಿಪೋಡೆ, ಜಾನಕರ, ದೊಂಡು ಎಂಬ ಅಡ್ಡ ಹೆಸರುಳ್ಳವರ ಬ್ಯಾಂಕ್ ಖಾತೆಗೆ ಕೂಲಿ ಹಣ ಪಾವತಿಯಾಗಿದೆ. ಆದರೆ, ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡುತ್ತಿದ್ದ ದಿನದಲ್ಲಿ ಅದೇ ಹೆಸರಿನ ವ್ಯಕ್ತಿಗಳು ಬಯೋಮೆಟ್ರಿಕ್ ಹಾಜರಾತಿ ನೀಡಿ ಆಹಾರ ಇಲಾಖೆ ವಿತರಿಸುವ ಪಡಿತರವನ್ನು ಪಡೆದಿದ್ದಾರೆ. ಒಂದೇ ದಿನ ಕೆಲಸದ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ಎರಡು ಕಡೆ ಹಾಜರಿ ಹಾಕಿರುವುದು ಈ ಹಗರಣದ ಇನ್ನೊಂದು ವಿಶೇಷ!



