ಕಾರವಾರ: ಸರ್ಕಾರಿ ಮೆಡಿಕಲ್ ಕಾಲೇಜಿನ ತ್ಯಾಜ್ಯದ ನೀರು ನೇರವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಕಡಲಿನಲ್ಲಿ ವಾಸಿಸುವ ಮೀನುಗಳ ಮೇಲೆಯೂ ಈ ತ್ಯಾಜ್ಯ ದುಷ್ಪರಿಣಾಮ ಬೀರಲಿದ್ದು, ಮೀನು ಸೇವಿಸುವವರ ಆರೋಗ್ಯ ಹಾಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ!
ಮೆಡಿಕಲ್ ಕಾಲೇಜಿನ ತ್ಯಾಜ್ಯವನ್ನು ಕೋಣೆನಾಲಕ್ಕೆ ಬಿಡಲಾಗುತ್ತದೆ. ಕೋಣೆನಾಲದ ನೀರು ನಗರವನ್ನೆಲ್ಲ ಸಂಚರಿಸಿ ಸಮುದ್ರ ಸೇರುತ್ತಿದೆ. ಕೋಣೆನಾಲ ಸ್ವಚ್ಛತೆ ಹೆಸರಿನಲ್ಲಿ ಕೋಟಿ ಲೆಕ್ಕಾಚಾರದ ಹಣ ವೆಚ್ಚವಾಗಿದ್ದರೂ ತ್ಯಾಜ್ಯ ಮಾತ್ರ ಸಂಸ್ಕರಣೆಯಾಗಿಲ್ಲ. ಕೋಣೆನಾಲದ ತ್ಯಾಜ್ಯ ಸಮುದ್ರ ಸೇರುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಕಾರವಾರದ ಮೆಡಿಕಲ್ ಕಾಲೇಜಿನ ಮಾಲೀನ್ಯದ ನೀರು ಹಲವು ಸರ್ಕಾರಿ ಕಚೇರಿ-ಅಧಿಕಾರಿಗಳ ನಿವಾಸ ಸುತ್ತುವರೆದು ಸಮುದ್ರ ಸೇರುತ್ತಿದೆ. ಈ ನೀರಿನಲ್ಲಿ ಮೆಡಿಕಲ್ ಕಾಲೇಜಿನ ರೋಗಿಗಳ ಮಲಮೂತ್ರ ಹಾಗೂ ಇತರ ವೈದ್ಯಕೀಯ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ಅಪಾಯಕಾರಿ ರಾಸಾಯನಿಕಗಳು ಸಹ ಈ ನೀರಿನ ಮೂಲಕ ನೇರವಾಗಿ ಸಮುದ್ರ ಸೇರುತ್ತಿವೆ. ಜಿಲ್ಲಾ ಪಂಚಾಯತ ಕಪೌಂಡ್ ಗೋಡೆಗಳ ಮೇಲೆ ಬರೆದಿರುವ `ಸ್ವಚ್ಛ ಭಾರತ’ದ ಬಗ್ಗೆ ಯೋಚಿಸುವಷ್ಟು ಪುರಸೋತು ಅಲ್ಲಿ ಕೆಲಸ ಮಾಡುವವರಿಗಿಲ್ಲ.
ಇನ್ನೂ ಹಲವು ಕಡೆ ತ್ಯಾಜ್ಯದ ನೀರು ರಸ್ತೆ ಮೇಲೆ ಹರಿಯುತ್ತದೆ. ಮ್ಯಾನ್‌ಹೋಲ್’ಗಳಿಂದ ಕೆಲವೊಮ್ಮೆ ಪುಟಿಯುತ್ತಿರುತ್ತದೆ. ವೇಗವಾಗಿ ವಾಹನ ಸಾಗುವಾಗ ಅಕ್ಕ-ಪಕ್ಕದಲ್ಲಿರುವವರಿಗೂ ಪ್ರೋಕ್ಷಣೆಯಾಗುತ್ತದೆ. ಆದರೆ, ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. `ಮೆಡಿಕಲ್ ಕಾಲೇಜಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೆವಾರಿ ಮಾಡಲಾಗುತ್ತದೆ’ ಎಂಬುದು ಅಲ್ಲಿನವರ ಮಾತು. ಆದರೆ, ಮೆಡಿಕಲ್ ಕಾಲೇಜಿನಲ್ಲಿ ಈವರೆಗೂ ಎಸ್‌ಟಿಪಿ ಸೌಲಭ್ಯವಿಲ್ಲ ಎಂಬುದು ಅಲ್ಲಿನವರಿಗೂ ಗೊತ್ತಿರುವ ವಿಷಯ.