ಅಂಕೋಲಾ: ಅವರಿಗೆಲ್ಲರಿಗೂ ಮನೆ ಇದೆ. ಮನೆಗೆ ವಿದ್ಯುತ್ ಇದೆ. ಅಲ್ಪ ಪ್ರಮಾಣದಲ್ಲಿ ಭೂಮಿಯಿದೆ. ಭೂಮಿಯಲ್ಲಿ ಫಸಲು ಬರುತ್ತಿದೆ. ಆದರೆ, ದಾಖಲೆಗಳ ಪ್ರಕಾರ ಇದಕ್ಕೆ ಅವರು ಒಡೆಯರಲ್ಲ!
ತಲಾತರದಿಂದ ಅರಣ್ಯ ಭೂಮಿ ಅತಿಕ್ರಮಿಸಿ ವಾಸ ಮಾಡುತ್ತಿದ್ದವರಿಗೆ ಸರ್ಕಾರ ಎಲ್ಲಾ ಬಗೆಯ ಸೌಲಭ್ಯ ನೀಡಿದರೂ ಭೂಮಿ ಹಕ್ಕು ನೀಡಿಲ್ಲ. ಹೀಗಾಗಿ ಆ ಭೂಮಿಯಲ್ಲಿನ ಬೆಳೆ ಹಾನಿ, ಕಾಡು ಪ್ರಾಣಿ ಹಾವಳಿ ಸೇರಿ ನಷ್ಟ ಅನುಭವಿಸಿದರೂ ಅವರಿಗೆ ಸರ್ಕಾರದಿಂದ ಪರಿಹಾರ ಸಿಗಲ್ಲ!
ಶನಿವಾರ ಅಂಕೋಲಾ ತಾಲೂಕಿನ ಹೊಸಗದ್ದೆ ಗ್ರಾಮದ ಮರದ ಅಡಿ ನಡೆದ ಅರಣ್ಯವಾಸಿಗಳ ಸಮಸ್ಯೆಗಳ ಸಮಾಲೋಚನಾ ಸಭೆಯಲ್ಲಿ ಈ ವಿಷಯದ ಬಗ್ಗೆಯೇ ಚರ್ಚೆ ನಡೆಯಿತು. ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿ `ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಅವಶ್ಯ. ಕಾನೂನು ಪರಿಪಾಲನೆಯಲ್ಲಿ ಅಧಿಕಾರಿ ವರ್ಗಗಳ ಹಸ್ತಕ್ಷೇಪದಿಂದ ಹಾಗೂ ಕಾನೂನು ಅರ್ಥೈಸುವಲ್ಲಿ ಉಂಟಾದ ಗೊಂದಲದಿAದ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ’ ಎಂದು ದೂರಿದರು.
`ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಹಕ್ಕು ಅನಿವಾರ್ಯ. ಅರಣ್ಯ ಭೂಮಿ ಹಕ್ಕು ಸಿಗುವರೆಗೂ ಹೋರಾಟ ನಿರಂತರ’ ಎಂದು ರವೀಂದ್ರ ನಾಯ್ಕ ಹೇಳಿದರು. ಸ್ಥಳೀಯ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಶಂಕರ ನಾಯ್ಕ, ಸಂಚಾಲಕ ರಾಜೇಶ ಮಿತ್ರ ನಾಯ್ಕ, ವಿಜು ಪೀಟರ್ ಪಿಲ್ಲೆ, ಶಂಕರ ನಾಯಕ್, ಜನ್ನ ಗೌಡ, ಮಂಗೇಶ ಬಾಬು ಗೌಡ, ಅರವಿಂದ ಗೌಡ, ದೇವರಾಜ ನಾಯಕ, ಗುಲಾಬಿ ಗೌಡ, ಸೋಮೇಶ್ವರ ಗೌಡ, ನಾಗರಾಜ ನಾಯ್ಕ, ಗಣೇಶ ನಾಯ್ಕ, ರಾಜೇಶ ನಾಯ್ಕ, ಸುಮೇಶ ಗೌಡ ಇತರರು ಧ್ವನಿಯಾದರು.