ಯಲ್ಲಾಪುರ: ಕರಡಿ ದಾಳಿಗೆ ತತ್ತರಿಸಿದ್ದ ಆರ್ ಎಸ್ ಭಟ್ಟ ಹುತ್ಕಂಡ ಅವರು ಆಸ್ಪತ್ರೆಯಲ್ಲಿದ್ದರೂ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆರ್ ಎಸ್ ಭಟ್ಟ ಅವರು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ ಅವರ ತಂಡದಲ್ಲಿದ್ದ 13 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹುತ್ಕಂಡದ ಆರ್ ಎಸ್ ಭಟ್ಟ ಅವರು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಅವರ ನೇತ್ರತ್ವದಲ್ಲಿಯೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರೆಲ್ಲರ ಗೆಲುವಿಗಾಗಿ ಆರ್ ಎಸ್ ಭಟ್ಟ ಅವರು ಎಲ್ಲಾ ಕಡೆ ಓಡಾಟ ನಡೆಸುತ್ತಿದ್ದರು.
ಈ ನಡುವೆ ಡಿ 21ರಂದು ಅವರ ಮೇಲೆ ಕರಡಿ ದಾಳಿ ನಡೆಯಿತು. ಅಂತೂ ಜೀವ ಉಳಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾದರು. ಡಿ 23ರಂದು ಪಿಎಲ್‌ಡಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕೊನೆ ದಿನವಾಗಿದ್ದು, ಅದೇ ದಿನ ಆರ್ ಎಸ್ ಭಟ್ಟರು ಚಂದ್ಗುಳಿ ಭಾಗದಿಂದ ಅವಿರೋಧವಾಗಿ ಆಯ್ಕೆಯಾದರು. ಅದೇ ದಿನ ಉಳಿದ ನಾಲ್ಕು ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ನಡೆಯಿತು.
ಇನ್ನುಳಿದ 14 ಕ್ಷೇತ್ರಗಳಿಗಾಗಿ ಭಾನುವಾರ ಚುನಾವಣೆ ನಡೆದಿದ್ದು, ಆ ಪೈಕಿ 13 ಕ್ಷೇತ್ರಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾದರು. ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್ ಎಸ್ ಭಟ್ಟ ಹಾಗೂ ಉಪಾಧ್ಯಕ್ಷರಾಗಿದ್ದ ನಾಗೇಂದ್ರ ಭಟ್ಟ ಸಹ ಕಾಂಗ್ರೆಸ್ ಬೆಂಬಲಿತರಾಗಿದ್ದರು. ಹೀಗಾಗಿ ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಆರ್ ಎಸ್ ಭಟ್ಟರು ಭಾನುವಾರ ಬೆಳಗ್ಗೆ ಪಿಎಲ್‌ಡಿ ಬ್ಯಾಂಕಿನ ಮುಂದೆ ಕೆಲ ಕಾಲ ಕಾಣಿಸಿಕೊಂಡರು.
ಈ ಚುನಾವಣೆಯಲ್ಲಿ ಒಂದು ಕ್ಷೇತ್ರ ಬಿಜೆಪಿ ಬೆಂಬಲಿತರ ಪಾಲಾಯಿತು. ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದರು.