ಶಿರಸಿ: `ಶಿರಸಿ ಹೈಟೆಕ್ ಆಸ್ಪತ್ರೆಗೆ ಹಣವಿಲ್ಲ. ಶಾಸಕರು ಅಭಿವೃದ್ಧಿ ಮಾಡುತ್ತಿಲ್ಲ’ ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. `ಹೈಟೆಕ್ ಆಸ್ಪತ್ರೆ ಪೂರ್ಣಗೊಂಡಾಗ ಅನಗತ್ಯ ಆರೋಪ ಮಾಡಿದ ಅನಂತಮೂರ್ತಿ ಹೆಗಡೆ ಅವರು ಆ ವೇಳೆ ಕ್ಷಮೆ ಕೇಳಬೇಕಾಗುತ್ತದೆ’ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ.
`ಆಸ್ಪತ್ರೆಗೆ ಹಣ ಇಲ್ಲ ಎಂದಾದರೆ ಅಷ್ಟು ದೊಡ್ಡ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಅದಾಗಿಯೂ ಆಸ್ಪತ್ರೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಯಾವುದಾದರೂ ಅಧಿಕಾರಿ-ಗುತ್ತಿಗೆದಾರರು ದಾಖಲೆ ನೀಡಿದ್ದರೆ ಅದನ್ನು ಅನಂತಮೂರ್ತಿ ಹೆಗಡೆ ಬಿಡುಗಡೆ ಮಾಡಬೇಕು’ ಎಂದು ಪ್ರಸನ್ನ ಶೆಟ್ಟಿ ಸವಾಲು ಹಾಕಿದ್ದಾರೆ. `ಅನಂತಮೂರ್ತಿ ಹೆಗಡೆ ಪ್ರಚಾರಕ್ಕಾಗಿ ಅನಗತ್ಯ ಹೇಳಿಕೆ ನೀಡುತ್ತಿದ್ದು, ದಾಖಲೆ ಇಲ್ಲದೇ ಜನಪ್ರತಿನಿಧಿಗಳನ್ನು ಗುರಿಯಾಗಿರಿಸಿಕೊಂಡು ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಮೂರ್ತಿ ಹೆಗಡೆ ಅನುಮಾನ ವ್ಯಕ್ತಪಡಿಸಿದ್ದು, ಅನುದಾನದ ಬಗ್ಗೆ ಮಾಹಿತಿ ನೀಡದೇ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ್ದರು. ಆ ಸುದ್ದಿ ಇಲ್ಲಿ ಓದಿ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ: ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ
`ಭೀಮಣ್ಣ ನಾಯ್ಕ ಅವರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೂ ಅನುದಾನ ತಂದು ಕೆಲಸ ಮುಗಿಸುತ್ತಿದ್ದಾರೆ’ ಎಂದು ಪ್ರಸನ್ನ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ. `ಅನಂತಮೂರ್ತಿ ಹೆಗಡೆ ಅವರು ಈವರೆಗೆ ಒಂದೇ ಒಂದು ಹೋರಾಟವನ್ನು ಸಹ ಪೂರ್ಣಗೊಳಿಸಿಲ್ಲ. ಸಿಕ್ಕ ಸಿಕ್ಕ ವಿಷಯಗಳಲ್ಲಿ ಮೂಗು ತೂರಿಸುವ ಬದಲು ಇನ್ನೂ ಶಂಕು ಸ್ಥಾಪನೆಯೇ ಆಗದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅವರು ಹೋರಾಟ ನಡೆಸಬೇಕು’ ಎಂದು ಪ್ರಸನ್ನ ಶೆಟ್ಟಿ ಆಗ್ರಹಿಸಿದ್ದಾರೆ.