ಶಿರಸಿ: ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವ ಕನಸು ಕಂಡ ಸಾವಿರಾರು ಮಕ್ಕಳಿಗೆ `ಸ್ಕೇಟಿಂಗ್’ ತರಬೇತಿ ನೀಡುತ್ತಿರುವ ಅದ್ವೈತ ಸ್ಕೇಟಿಂಗ್ ಇದೀಗ ಹಾವೇರಿಯ ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳಿಗೂ ಸಾಹಸ ಚಟುವಟಿಕೆಯ ತರಬೇತಿ ನೀಡಲು ಮುಂದಾಗಿದೆ.
ಶಿರಸಿಯ ಅದ್ವೈತ ಸ್ಕೇಟಿಂಗ್ ಕಳೆದ ಐದು ವರ್ಷದಿಂದ ಸ್ಕೇಟಿಂಗ್ ತರಬೇತಿ ನೀಡುತ್ತಿದೆ. ಇಲ್ಲಿ ಕಲಿತ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸ್ಕೇಟಿಂಗ್ ಸಾಧನೆ ಮಾಡಿದ್ದಾರೆ. ಇದನ್ನು ಗಮನಿಸಿದ ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲ್’ನ ಆಡಳಿತ ಮಂಡಳಿ ಅದ್ವೈತ ಸ್ಕೇಟಿಂಗ್’ನ ಅಧ್ಯಕ್ಷ ಕಿರಣಕುಮಾರ ಅವರಿಗೆ ಶಾಲಾ ಆವರಣದೊಳಗೆ ಆಮಂತ್ರಣ ನೀಡಿದೆ.
ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅದ್ವೈತ ಸ್ಕೇಟಿಂಗ್’ನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅಭಿ ಕೆಲ್ಲಾ, ನಮನ ನಾಯಕ, ಆರ್ಯನ್ ಗೌಳಿ, ಮೋಹಿತ್ ದೇವಾಡಿಗ ಜೊತೆ ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡನಲ್ಲಿ ಹೆಸರು ದಾಖಲಿಸಿದ ಅದ್ವೈತ ಕುಡಾಳಕರ ಅವರ ಪ್ರತಿಭೆ ನೋಡಿ ಅಲ್ಲಿದ್ದವರು ಚಪ್ಪಾಳೆ ತಟ್ಟಿದರು.
ಈ ವೇಳೆ ನೂತನ ಸ್ಕೇಟಿಂಗ್ ರಿಂಕನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಉದ್ಘಾಟಿಸಿದರು. ಸ್ಕೇಟಿಂಗ್ ತರಬೇತುದಾರ ತರುಣ ಗೌಳಿ, ಶಾಲಾ ಮುಖ್ಯಸ್ಥ ನರೇಂದ್ರ ಮಾಳಿ, ಸಂಸ್ಥೆ ಕಾರ್ಯದರ್ಶಿ ಸೌಮ್ಯ ಮಾಳಿ, ಪ್ರಾಚಾರ್ಯ ಜೇವಿಯರ್ ಅಂಥೋನಿ ಇದಕ್ಕೆ ಸಾಕ್ಷಿಯಾದರು.