ಹೊನ್ನಾವರ: ಐದಾರು ಲಕ್ಷ ಸಾಲ ಮಾಡಿಕೊಂಡಿದ್ದ ಧರ್ಮ ನಾಯ್ಕ ಅವರು ತಮ್ಮ ತೋಟದ ಬಾವಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಹೊನ್ನಾವರ ಮೂಡ್ಕಣಿ ಮಕ್ಕಿಗದ್ದೆ ಹಳ್ಳರಕೇಣಿಯ ಧರ್ಮ ನಾಯ್ಕ ಅವರು ರೈತರಾಗಿದ್ದರು. ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದ ಅವರು ಮೊದಲ ಮಗಳ ಮದುವೆ ಮಾಡಿದ್ದರು. ಡಿ 27ರಂದು ಮೊದಲ ಮಗಳು ಗಾಯತ್ರಿ ನಾಯ್ಕ, ಅಳಿಯ ರಾಘವೇಂದ್ರ ಅವರ ಜೊತೆ ಧರ್ಮ ನಾಯ್ಕ ಅವರ ಇನ್ನಿಬ್ಬರು ಮಕ್ಕಳಾದ ಸಿಂಧು ಹಾಗೂ ಸಹನಾ ಅವರೊಂದಿಗೆ ಇಡೀ ಕುಟುಂಬದವರು ಧರ್ಮಸ್ಥಳ ಯಾತ್ರೆ ಮಾಡಿದ್ದರು.
ಡಿ 28ರಂದು ಅವರೆಲ್ಲರೂ ಮನೆಗೆ ಮರಳಿದ್ದು, ಆಗಲೂ ಧರ್ಮ ನಾಯ್ಕ ಅವರು ತಮಗಿರುವ ಸಾಲದ ಬಗ್ಗೆ ಚಿಂತೆಯಲ್ಲಿದ್ದರು. ಡಿ 29ರ ಬೆಳಗ್ಗೆ ಧರ್ಮ ನಾಯ್ಕ ಅವರು ತೋಟದ ಕೆಲಸಕ್ಕೆ ಹೋಗಿದ್ದು, ಮರಳಿ ಬರಲಿಲ್ಲ. ಪಕ್ಕದ ಮನೆಯ ಚನ್ನಪ್ಪ ನಾಯ್ಕ ಅವರು ಬಂದು `ಬಾವಿಯ ಕಬ್ಬಿಣದ ಪೈಪಿಗೆ ಧರ್ಮ ನಾಯ್ಕ ಅವರು ತೂಗುತ್ತಿದ್ದಾರೆ’ ಎಂಬ ವಿಷಯ ಮುಟ್ಟಿಸಿದರು.
ಧರ್ಮ ನಾಯ್ಕ ಅವರ ಪತ್ನಿ ಜೊತೆ ಮಕ್ಕಳೆಲ್ಲರೂ ಸೇರಿ ಅದೇ ಊರಿನ ತಿಮ್ಮಪ್ಪ ನಾಯ್ಕ ಅವರನ್ನು ಕರೆದುಕೊಂಡು ಬಾವಿ ಬಳಿ ಹೋದರು. ಅಲ್ಲಿ ನೀರು ಸೇದಲು ಅಳವಡಿಸಿದ್ದ ಕಬ್ಬಿಣದ ರಾಡಿಗೆ ಧರ್ಮ ನಾಯ್ಕ ಅವರು ನೇಣು ಹಾಕಿಕೊಂಡಿದ್ದರು. ಅಲ್ಲಿದ್ದ ಹಗ್ಗವನ್ನು ಕತ್ತರಿಸಿ ಅವರನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಪ್ರಯೋಜವಾಗಲಿಲ್ಲ.



