ಅಂಕೋಲಾ: ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ.
ಸರಸ್ವತಿ ನೀಲಕಂಠ ಶೇಟ್ (85 ವರ್ಷ) ಅವರು ಅಲಗೇರಿಯಲ್ಲಿ 5.3 ಗುಂಟೆ ಕ್ಷೇತ್ರದ ಒಡೆಯರಾಗಿದ್ದಾರೆ. ಅಲ್ಲಿಯೇ ಅವರು ಮನೆ ನಿರ್ಮಿಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾರೆ. ಅಲಗೇರಿ ಕ್ಷೇತ್ರದ ಪಹಣಿ ಪತ್ರಿಕೆಯಲ್ಲಿ ಅವರ ಹೆಸರಿದೆ. ಮನೆ ತೆರಿಗೆ ಪಾವತಿಸಿದ ರಸೀದಿಗಳು ಸಹ ಅವರ ಬಳಿಯಿದೆ. ಅವರ ಭೂಮಿಯ ಸುತ್ತಲಿನ ಎಲ್ಲಾ ಕ್ಷೇತ್ರವೂ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನವಾಗಿದೆ. ಆದರೆ, ನಡುವೆ ಬದುಕುತ್ತಿರುವ ಸರಸ್ವತಿ ಅವರ ಭೂಮಿಯಲ್ಲಿನ ಮನೆಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆದಿಲ್ಲ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡು ಪರಿಹಾರ ಪಡೆಯುವವರ ಪಟ್ಟಿಯಲ್ಲಿ ಸಹ ಈ ವೃದ್ಧೆಯ ಹೆಸರಿಲ್ಲ!
ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ವಶಕ್ಕೆ ಪಡೆದ ಭೂಮಿಗೆ ಸಂಬoಧಿಸಿ ಅಕ್ಕ-ಪಕ್ಕದ ಎಲ್ಲರಿಗೂ ಪರಿಹಾರ ಸಿಕ್ಕಿದೆ. ಆದರೆ, ಪೂರ್ವಜರ ಕಾಲದಿಂದಲೂ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ಸರಸ್ವತಿ ಶೇಟ್ ಅವರಿಗೆ ಮಾತ್ರ ಈವರೆಗೂ ಬಿಡಿಗಾಸು ಬಂದಿಲ್ಲ. ವಿಮಾನ ನಿಲ್ದಾಣ ಬರುವ ಭೂ ಪ್ರದೇಶದ ಭಾಗದಲ್ಲಿದ್ದರೂ ಸರಸ್ವತಿ ಶೇಟ್ ಅವರ ಹೆಸರು ಪರಿಹಾರ ಪಟ್ಟಿಯಲ್ಲಿಲ್ಲ. `ತಮಗೆ ನ್ಯಾಯ ಕೊಡಿಸಿ’ ಎಂದು ಸರಸ್ವತಿ ಶೇಟ್ ಅವರು ಈಗಲೂ ಕುಮಟಾ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಮೂರು ಸಹಾಯಕ ಆಯುಕ್ತರು ಬದಲಾದರೇ ವಿನ: ವೃದ್ಧ ಮಹಿಳೆಗೆ ನ್ಯಾಯ ಸಿಕ್ಕಿಲ್ಲ!
ಅಲಗೇರಿಯ ಮನೆಯಲ್ಲಿ ಸರಸ್ವತಿ ಶೇಟ್ ಒಂಟಿಯಾಗಿ ವಾಸ ಮಾಡುತ್ತಾರೆ. ಅವರ ಮಗ ಕುಮಟಾದಲ್ಲಿ ವಾಸವಾಗಿದ್ದು, ಆಗಾಗ ಮನೆಗೆ ಬಂದು ಹೋಗುತ್ತಾರೆ. ಸರಸ್ವತಿ ಅವರ ಪುತ್ರ ದೇವಪ್ಪ ಸಹ ಕಾಗದ-ಪತ್ರಗಳನ್ನು ಸರ್ಕಾರಕ್ಕೆ ಕೊಡುವುದಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಆದರೆ, ಮಾಡಿದ ಖರ್ಚಿನಷ್ಟು ಪರಿಹಾರವೂ ಬಂದಿಲ್ಲ. ಸರಸ್ವತಿ ಶೇಟ್ ಅವರು ಅರ್ಜಿ ಸಲ್ಲಿಸಿದ ನಂತರ ಕೆಲ ಅಧಿಕಾರಿಗಳು ಅವರ ಮನೆಗೆ ಬಂದು ಹೋಗಿದ್ದಾರೆ. ಆದರೆ, ಅಲ್ಲಿರುವ ಅಡಿಕೆ, ಪೇರಲೆ ಮರ-ಗಿಡಗಳನ್ನು ಎಣಿಸಿಲ್ಲ. ಮನೆ ಇದ್ದರೂ ಮನೆಯ ಬಗ್ಗೆ ದಾಖಲೆಯಲ್ಲಿ ನಮೂದಿಸಿಲ್ಲ. ಅಧಿಕಾರಿಗಳು ಬಂದು ಹೋದ ನಂತರವೂ ಪರಿಹಾರ ವಿತರಣೆ ಹಾಗೂ ಭೂ ಸ್ವಾಧೀನ ಪಟ್ಟಿಯಲ್ಲಿ ಸರಸ್ವತಿ ಶೇಟ್ ಅವರ ಹೆಸರು ಬಂದಿಲ್ಲ!
ಸೋಮವಾರ ಸರಸ್ವತಿ ಶೇಟ್ ಅವರು ತಮಗಾದ ಸಮಸ್ಯೆಯನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಲ್ಲಿ ತೋಡಿಕೊಂಡರು. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೂರು ಉಪವಿಭಾಗಾಧಿಕಾರಿ ಬದಲಾದರೂ ಸರಸ್ವತಿ ಶೇಟ್ ಅವರ ಅರ್ಜಿಗೆ ಹಿಂಬರಹ ಸಿಗದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಹಿರಿಯ ನಾಗರಿಕರಿಗೆ ಅನ್ಯಾಯವಾದ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.
ಅಲಗೇರಿಯಲ್ಲಿ ಸರಸ್ವತಿ ಶೇಟ್ ಅವರ ಬದುಕು ಹೇಗೆ? ಅವರಿಗೆ ಆದ ಅನ್ಯಾಯವೇನು? ವಿಡಿಯೋ ಇಲ್ಲಿ ನೋಡಿ..