ಕಾರವಾರ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದಿದೆ. `ಶಾಂತಾರಾಮ ಸಿದ್ದಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟನೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿಯವರು ಆಗ್ರಹಿಸಿದ್ದಾರೆ.
`ಶಾಂತರಾಮ ಸಿದ್ದಿ ಅವರು ನೈಜ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹೊರತಾಗಿ ಇತರರಿಗೂ ಪರಿಶಿಷ್ಟ ಪ್ರಮಾಣ ಪತ್ರ ನೀಡಬೇಕು ಎಂಬ ನಿಲುವನ್ನು ಹೊಂದಿದ್ದಾರೆ. ಒಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಯಾಗಿ ಅವರಿಗೆ ಪರಿಶಿಷ್ಟ ಸಮುದಾಯದವರ ಬಗ್ಗೆ ಗೌರವವಿಲ್ಲ’ ಎಂದು ಸಮಿತಿಯ ದೀಪಕ ಕುಡಾಳಕರ್ ದೂರಿದರು.
`ಉತ್ತರ ಕನ್ನಡ ಜಿಲ್ಲಾಡಳಿತ ಕರೆದಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಖಂಡರ ಸಭೆಯಲ್ಲಿ ಜನಪ್ರತಿನಿಧಿಗಳಿಗೆ ಆಹ್ವಾನವಿರಲಿಲ್ಲ. ಅದಾಗಿಯೂ ಶಾಂತರಾಮ ಸಿದ್ದಿ ವೇದಿಕೆಯಲ್ಲಿ ಕುಳಿತು ಗೊಂಡ ಸಮುದಾಯದ ಯುವತಿಗೆ ಪರಿಶಿಷ್ಟ ಪಂಗಡ ಪ್ರಮಾಣ ನೀಡುವ ಬಗ್ಗೆ ಮಾತನಾಡಿದ್ದರು. ಇದಕ್ಕೆ ಸಭೆಯಲ್ಲಿದ್ದವರು ವಿರೋಧಿಸಿದಾಗ ಯುವತಿ ಬಳಿ ನಮ್ಮ ವಿರುದ್ಧ ಮಾತನಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಶಾಂತಾರಾಮ ಸಿದ್ದಿ ಅವರ ನಡೆಯನ್ನು ಪ್ರಮುಖರಾದ ರವೀಂದ್ರ ಮಂಗಳ, ತುಳಸಿದಾಸ ಪಾವಸ್ಕರ, ಸಂತೋಷ ಚಂದಾವರ, ನಾಗರಾಜ ತಳವಾರ ಸಹ ವಿರೋಧಿಸಿದರು.