ಕಾರವಾರ: ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. 2025ರ ಸ್ವಾಗತದ ನೆಪದಲ್ಲಿ ಧ್ವನಿ ವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇದರೊಂದಿಗೆ ಇನ್ನು ಹಲವು ನಿಯಮಗಳನ್ನು ಹೇರಲಾಗಿದೆ. ಅದನ್ನು ಪಾಲಿಸದಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೂ ಜಿಲ್ಲಾಡಳಿತ ಸೂಚಿಸಿದೆ. ಸಂಭ್ರಮಾಚರಣೆ ಭರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೋಟಾರ್ ಸೈಕಲ್ ವೀಲಿಂಗ್ ನಡೆಸುವ ಹಾಗಿಲ್ಲ. ಎಲ್ಲೆಂದರಲ್ಲಿ ವಾಹನ ನಿಲುಗಡೆಗೆ ಸಹ ಅವಕಾಶವಿಲ್ಲ. ಮದ್ಯ ಸೇವಿಸಿ ಸಮುದ್ರ, ಜಲಪಾತಗಳ ನೀರಿಗೆ ಇಳಿಯುವುದನ್ನು ಸಹ ನಿಷೇಧಿಸಲಾಗಿದೆ.
ಇನ್ನೂ ಹೊಸ ವರ್ಷಾಚರಣೆ ನೆಪದಲ್ಲಿ ಮಹಿಳೆಯರಿಗೆ ತೊಂದರೆ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅನುಚಿತ ವರ್ತನೆ ನಡೆಸುವವರ ಮೇಲೆ ನಿಗಾ ಇಡುವಂತೆ ಅವರು ತಿಳಿಸಿದ್ದು, ಸಂಜೆ 6 ಗಂಟೆ ನಂತರ ಕಡಲತೀರದಲ್ಲಿ ಬೋಟಿಂಗ್ ಮಾಡಬಾರದು ಎಂದು ತಿಳಿಸಿದ್ದಾರೆ.
ಬಾರ್ & ರೆಸ್ಟೋರೆಂಟ್ ಹಾಗೂ ಹೋಂ ಸ್ಟೇ’ಗಳಲ್ಲಿಯೂ ಶಿಸ್ತು ಕಾಪಾಡಬೇಕು. ಅಬಕಾರಿ ಕಾಯ್ದೆಯಲ್ಲಿ ಸೂಚಿಸಿದ ಪ್ರಕಾರ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಧ್ವನಿ ವರ್ಧಕಗಳನ್ನು ಬಳಸುವುದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ಮನಗಂಡು ಧ್ವನಿ ವರ್ಧಕ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.