ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತೋಟದಲ್ಲಿ ಬುಧವಾರ ಕೊನೆ ಕೊಯ್ಲು. ಹೀಗಾಗಿ ಬೆಳಗ್ಗಿನ ಒಂದು ಹೊತ್ತು ಅವರು ಹಗ್ಗ ಹಿಡಿದರು!
ಬಿಡುವಿಲ್ಲದ ಕೆಲಸದ ನಡುವೆಯೂ ಸಂಸದ ಕಾಗೇರಿ ಬುಧವಾರ ತಮ್ಮ ಮನೆ ಕೆಲಸದವರೊಂದಿಗೆ ಕಾಲ ಕಳೆದರು. ಬಿಳಿ ಲುಂಗಿ-ಟೀ ಶರ್ಟ ಧರಿಸಿ ತೋಟಕ್ಕೆ ಇಳಿದ ವಿಶ್ವೇಶ್ವರ ಹೆಗಡೆ ಅವರು ಮೊದಲು ತೋಟ ಸುತ್ತಾಡಿದರು. ನಂತರ ಅಡಿಕೆ ಮರದ ಕೆಳಗೆ ನಿಂತು ಹಗ್ಗ ಹಿಡಿದರು. ಮರ ಏರಿದ್ದ ಕೊನೆ ಗೌಡನಿಗೆ `ನಿಧಾನವಾಗಿ ಕೊನೆ ಕೆಳಗೆ ಬಿಡು’ ಎಂದು ಸೂಚಿಸಿ ಹಗ್ಗದ ಮೂಲಕ ಕೊನೆಯನ್ನು ಇಳಿಸಿಕೊಂಡರು.
ಕಾಗೇರಿಯವರ ಮನೆಯಲ್ಲಿ ಮೂವರು ಕೊನೆ ಗೌಡರು ಬುಧವಾರ ಕೊನೆ ಕೊಯ್ಲು ನಡೆಸಿದರು. ಇಬ್ಬರು ದೋಟಿ ಹಿಡಿದು ಅಡಿಕೆ ಕೊಯ್ಲು ಮಾಡಿದರು. ಅವರೆಲ್ಲರನ್ನು ಕಾಗೇರಿಯವರು ಮಾತನಾಡಿಸಿದರು. 11 ಗಂಟೆ ವೇಳೆಗೆ ಅವರ ಜೊತೆ ಅವಲಕ್ಕಿ-ಮಜ್ಜಿಗೆಯ ಆಸ್ರಿಗೆ ಕುಡಿದರು.
ಅವಿಭಕ್ತ ಕುಟುಂಬದಲ್ಲಿ ವಾಸವಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಳೆದ ವಿಧಾನಸಭಾ ಚುನಾವಣೆ ನಂತರ ಮನೆಯಲ್ಲಿದ್ದರು. ಸಂಸದರಾಗುವ ಮುನ್ನ ಅವರು ನಿತ್ಯ ತೋಟಕ್ಕೆ ಹೋಗುತ್ತಿದ್ದರು. ಆ ಅವಧಿಯಲ್ಲಿ ತೋಟದ ಅಭಿವೃದ್ಧಿಯನ್ನು ನಡೆಸಿದ್ದರು. `ಕೃಷಿ ಬಗ್ಗೆ ಅರಿವಿರುವ ಕಾರಣ ಕಾಗೇರಿ ಅವರಿಗೆ ತೋಟದ ಕೆಲಸ ಹೊಸದಲ್ಲ’ ಎಂದು ಅವರ ಆಪ್ತರು ಹೇಳಿದರು.
ಕಾಗೇರಿ ಮನೆ ಕೊನೆ ಕೊಯ್ಲು ವಿಡಿಯೋ ಇಲ್ಲಿ ನೋಡಿ..