ಅಂಕೋಲಾ: ಜೈಹಿಂದ್ ಹೈಸ್ಕೂಲ್ ಹಾಗೂ ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಚಾಲಕರು ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ್ದು, ಗೂಡಗಂಡಿ ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ. ರಿಕ್ಷಾ ನಿಲ್ದಾಣಕ್ಕೆ ಹೊಂದಿಕೊoಡು ಗೂಡಂಗಡಿ ನಿರ್ಮಿಸಿರುವುದರಿಂದ ಎದುರಾದ ಸಮಸ್ಯೆಗಳ ಬಗ್ಗೆ ಅವರು ವಿವರಿಸಿದ್ದಾರೆ. `ಆ ಗುಂಡಗಡಿಕಾರರಿಗೆ ಪರ್ಯಾಯ ಸ್ಥಳ ಸೂಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
`ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ರಿಕ್ಷಾ ನಿಲ್ದಾಣವಿದೆ. 23 ರಿಕ್ಷಾ ಚಾಲಕರು ಇಲ್ಲಿದ್ದು, 12 ರಿಕ್ಷಾಗಳಿಗೆ ಮಾತ್ರ ನಿಲುಗಡೆಯ ಸ್ಥಳಾವಕಾಶವಿದೆ. ಇಷ್ಟು ಇಕ್ಕಟ್ಟಾಗಿರುವ ಪ್ರದೇಶದಲ್ಲಿ ಇದೀಗ ಹೊಸದಾಗಿ ಗೂಡಂಗಡಿ ನಿರ್ಮಿಸಿರುವುದರಿಂದ ರಿಕ್ಷಾ ನಿಲುಗಡೆಗೆ ಇನ್ನಷ್ಟು ಸಮಸ್ಯೆಯಾಗಿದೆ’ ಎಂದು ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಹಾಗೂ ಅಂಕೋಲಾ ತಾಲೂಕ ಅಧ್ಯಕ್ಷ ಸಂಜೀವ್ ಬಲೇಗಾರ ವಿವರಿಸಿದರು.
`ಡಿ 9ರಂದು ಸಿಮೆಂಟ್ ರಸ್ತೆ ಮೇಲೆ ಕಬ್ಬಿಣದ ಗೂಡಂಗಡಿ ತಂದಿರಿಸಲಾಗಿದೆ. ಇದರಿಂದ ನಿತ್ಯ ಆ ಭಾಗದಲ್ಲಿ ಸಂಘರ್ಷ ಉಂಟಾಗುತ್ತಿದೆ. ರಿಕ್ಷಾ ಚಾಲಕರು ಹಾಗೂ ಗೂಡಂಗಡಿ ಮಾಲಕರ ನಡುವೆ ಘರ್ಷಣೆ ಆಗುವ ಮೊದಲು ಅದನ್ನು ತೆರವು ಮಾಡಬೇಕು. ಈ ಬಗ್ಗೆ ಪರಸಭೆ ಹಾಗೂ ಇನ್ನಿತರ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ರಿಕ್ಷಾ ಸಂಘಟನೆ ಪದಾಧಿಕಾರಿಗಳಾದ ಶಿವ ನಾಯಕ, ದೀಪಕ ನಾಯ್ಕ, ಸಂಜೀವ್ ನಾಯ್ಕ ಹಾಗೂ ಮಹೇಶ್ ಹುಲಸ್ವಾರ್ ದೂರಿದರು.
`ಡಿ 31ರಂದು ಪುರಸಭೆ ಅಧಿಕಾರಿಗಳು ಇಲ್ಲಿಗೆ ಆಗಮಿಸಿದಾಗ ಕೆಲ ಜನಪ್ರತಿನಿಧಿಗಳು ವಾಗ್ವಾದ ನಡೆಸಿದ್ದಾರೆ. ಗೂಡಂಗಡಿ ತೆರವು ಕಾರ್ಯಾಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ತೆರವು ಕಾರ್ಯಾಚರಣೆ ಸ್ಥಗಿತವಾಗಿದೆ. ಇಂಥ ಪರಿಸ್ಥಿತಿಯಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯೂ ಹೆಚ್ಚಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ರಿಕ್ಷಾ ಚಾಲಕರಾದ ಪಾಂಡುರAಗ ಬಾನಾವಳಿಕರ್, ಸುಧೀರ್ ನಾಯ್ಕ, ನಾಗರಾಜ್ ಕಾಂಬ್ಳೆ, ಸಚಿನ್ ನಾಯ್ಕ, ಸುನಿಲ್ ನಾಯ್ಕ, ಕೀರ್ತಿರಾಜ್ ನಾಯ್ಕ. ಗಣೇಶ್ ಗೌಡ, ಆದಿಶ್ ಅಶೋಕ್ ನಾಯ್ಕ, ಸೊಮನಾಥ್ ಕಾಂಬಳೆ ಸಹಿ ಮಾಡಿದ ಮನವಿ ಪತ್ರ ಸಲ್ಲಿಸಿದರು.
`ಬಡ ರಿಕ್ಷಾ ಚಾಲಕರಿಗೆ ಸಮಸ್ಯೆ ಆದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ. ಹೀಗಾಗಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಗೂಡಂಗಡಿ ತೆರವು ಮಾಡಿ ರಿಕ್ಷಾ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಲೋಹಿತ್ ಹುಲಸ್ವಾರ್ ಮಾರುತಿ ಆಗೇರ್. ಪ್ರಸನ್ನ ನಾಯ್ಕ, ವಿನೋದ ಗುನಗಾ. ಸಂದೀಪ್ ನಾಯ್ಕ, ಅಲ್ತಾಫ್ ಶೇಕ್. ದಿಲೀಪ್ ಹಳದಿಪುರ್ಕರ್, ಗೌರೀಶ್ ಕಾರ್ವಿ, ನಿಕೇಶ್ ಶೆಟ್ಟಿ, ರಮೇಶ್ ಆಗೇರ್ ಇತರರು ಒತ್ತಾಯಿಸಿದರು.