ಕುಮಟಾ: ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಕಳೆದ ಎರಡು ತಿಂಗಳಿನಿoದ ಪಿಂಚಣಿ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಅಶಕ್ತರ ಜೊತೆ ಅವರ ಕುಟುಂಬದವರು ಸಹ ಹೊಸ ವರ್ಷ ಆಚರಣೆ ಮಾಡಲು ಸಾಧ್ಯವಾಗಿಲ್ಲ!
ಪ್ರತಿ ತಿಂಗಳು 8ನೇ ತಾರಿಕಿನ ಒಳಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದ ಪಿಂಚಣಿ ಹಣ ಜಮಾ ಆಗುತ್ತಿತ್ತು. ಆದರೆ, ಅಕ್ಟೊಬರ್ ಹಾಗೂ ನವೆಂಬರ್ ತಿಂಗಳ ಹಣ ಈವರೆಗೂ ಪಾವತಿ ಆಗಿಲ್ಲ. `2025ರ ಜನವರಿ 8ರ ಒಳಗೆ ಡಿಸೆಂಬರ್ ತಿಂಗಳ ಹಣ ಪಾವತಿ ಆಗಬೇಕಿದ್ದು, ಅಷ್ಟರೊಳಗೆ ಹಳೆಯ ಬಾಕಿಯನ್ನು ಸೇರಿಸಿ ಜಮಾ ಮಾಡಬೇಕು’ ಎಂದು ಫಲಾನುಭವಿಗಳು ಸಂಬ0ಧಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನವಿ ಮಾಡಿದರು.
ವಿಕಲಚೇತನ ವೆಂಕಟ್ರಮಣ ಪಟಾಗಾರ ಮಾತನಾಡಿ `ಪಿಂಚಣಿ ಹಣ ಪಡೆಯುವುದಕ್ಕಾಗಿ ಬ್ಯಾಂಕ್ ಅಲೆದಾಡಿ ಸಾಕಾಗಿದೆ. ಸಾಲ ಮಾಡಿ ಜೀವನ ನಡೆಸುತ್ತಿದ್ದು, ಶೀಘ್ರದಲ್ಲಿ ಹಣ ಸಿಕ್ಕರೆ ಅನುಕೂಲ’ ಎಂದರು. 70 ವರ್ಷದ ರಾಜಮ್ಮ ನಾಯರ್ ಮಾತನಾಡಿ `ವೃದ್ಧಾಪ್ಯಕ್ಕೆ ಸರ್ಕಾರ ನೀಡುವ ಪಿಂಚಣಿ ಅನುಕೂಲವಾಗಿದ್ದು, ಅದು ಬಾರದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದರು.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮಾತನಾಡಿ `ಕೈಲಾಗದವರಿಗೆ ಸರ್ಕಾರ ಸತಾಯಿಸಬಾರದು. ಸಚಿವರು ಈ ಬಗ್ಗೆ ಗಮನಿಸಿ ತಕ್ಷಣ ಅವರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು. ವಿಕಲ ಚೇತನರಾದ ಈಶ್ವರ ನಾಯ್ಕ, ಅಬ್ರಾರ್ ಷರೀಫ್, ಹಿರಿಯ ನಾಗರಿಕರಾದ ಲಕ್ಷ್ಮೀ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಮನೋಹರ ನಾಯ್ಕ ಇದ್ದರು.