ಯಲ್ಲಾಪುರ: ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ಕೆಎಎಸ್ ಅಧಿಕಾರಿಯಾಗಿರುವ ಕಾವ್ಯರಾಣಿ ಅವರು ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಜೊತೆ ಬೆರೆತರು. ಕನ್ನಡ ಶಾಲೆಯಲ್ಲಿ ಅತ್ಯಾಧುನಿಕ ಸೌಕರ್ಯ ಕಲ್ಪಿಸಿ ಆಂಗ್ಲ ಭಾಷಾ ಕಲಿಕೆಗೂ ಒತ್ತು ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. `ಸಾಧನೆಗಾಗಿ ನಿರಂತರ ಪ್ರಯತ್ನ ಅಗತ್ಯ’ ಎಂದವರು ಮಕ್ಕಳಿಗೆ ಮನವರಿಕೆ ಮಾಡಿದರು.
ಕೆ ಕಾವ್ಯರಾಣಿ ಅವರ ತಂದೆ ವಿರೇಶ ನಾಯ್ಕ ನಿವೃತ್ತ ಪೊಲೀಸ್ ಅಧಿಕಾರಿ. ಹರಪನಳ್ಳಿಯ ಕಾಶಿ ಸಂಗಮೇಶ ಬಡಾವಣೆಯಲ್ಲಿ ಅವರ ವಾಸ. ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂಬುದು ಕಾವ್ಯರಾಣಿ ಅವರ ಬಾಲ್ಯದ ಆಸೆ. ಇದಕ್ಕಾಗಿ ಸಾಕಷ್ಟು ಶ್ರಮಿಸಿದ ಅವರು ಹೊಸಪೇಟೆಯ ಟಿವಿ ಡ್ಯಾಂ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಹೊಸಪೇಟೆಯಲ್ಲಿ ಎಂಬಿಎ ಪದವಿ ಪೂರೈಸಿ ಬೆಂಗಳೂರಿನಲ್ಲಿ ಒಂದು ವರ್ಷದ ಕೆಎಎಸ್ ಪರೀಕ್ಷೆಯ ತರಬೇತಿ ಪಡೆದರು. ಎಸ್‌ಡಿಎ, ಎಫ್‌ಡಿಎ ಸೇರಿ ಹಲವು ಪರೀಕ್ಷೆಗಳನ್ನು ಕಾವ್ಯರಾಣಿ ಎದುರಿಸಿದ್ದಾರೆ. ಕೊನೆಗೆ 2019ರ ಅವಧಿಯಲ್ಲಿ ಅವರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕೆ ಕಾವ್ಯರಾಣಿ ಅವರು ಪ್ರಸ್ತುತ ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಹಾಯಕ ಆಯುಕ್ತರಾಗಿದ್ದಾರೆ.
ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಶಾಲಾ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆಯೂ ಅವರು ಅರಿವು ಮೂಡಿಸಿದರು. ಶಾಲೆಯ ನಲಿ-ಕಲಿ ಕೊಠಡಿಯನ್ನು ವೀಕ್ಷಿಸಿದರು. 6ನೇ ತರಗತಿ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸುತ್ತಿರುವ ಬಗ್ಗೆ ಮುಖ್ಯ ಶಿಕ್ಷಕ ಸಂಜೀವ ಹೊಸ್ಕೇರಿ ಮಾಹಿತಿ ನೀಡಿದರು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಯಲ್ಲಿಯೂ ಇಂಟರ್‌ನೆಟ್ ಆಧಾರಿತ ಪಾಠ ಬೋಧನೆ ನೋಡಿ ಅಚ್ಚರಿ ವ್ಯಕ್ತಪಡಿಸಿದರು. ಅಥರ್ವ ಶಾಲಾವನ, ನಿರ್ಮಾಣ ಹಂತದಲ್ಲಿರುವ ವಿವೇಕ ಕೊಠಡಿ, ಶೌಚಾಲಯ ಕಟ್ಟಡಗಳ ಕೆಲಸ ಪರಿಶೀಲಿಸಿದರು.
ಈ ವೇಳೆ ಪಕ್ಕದ ಅಂಗನವಾಡಿಗೂ ತೆರಳಿ ಅಲ್ಲಿನ ಮಕ್ಕಳ ಜೊತೆ ಕಾಲ ಕಳೆದರು. ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ನಿರ್ಮಾಣವಾದ ಕಟ್ಟಡ ಗಮನಿಸಿದರು. `ಶಾಲೆ ಹಳೆಯದಾಗಿದ್ದರೂ ಇಲ್ಲಿನ ವಾತಾವರಣ ಸಮೃದ್ಧಿಯಿಂದ ಕೂಡಿದೆ. ಇಂಟರ್‌ನೆಟ್ ವ್ಯವಸ್ಥೆ, ಕೊಠಡಿ ನಿರ್ಮಾಣ, ವಿಶಾಲವಾದ ಆಟದ ಮೈದಾನಕ್ಕೆ ಊರಿನವರ ಕೊಡುಗೆಯೂ ಅಪಾರ. ಇನ್ನೆರಡು ಕೊಠಡಿ ನಿರ್ಮಿಸಲು ಆಡಳಿತ ಮಂಡಳಿ ಪ್ರಯತ್ನಿಸಿರುವುದು ಶ್ಲಾಘನೀಯ’ ಎಂದು ಕಾವ್ಯರಾಣಿ ಅವರು ಹೇಳಿದರು. ಈ ವೇಳೆ ಶಾಲೆ ಪರವಾಗಿ ಅವರನ್ನು ಗೌರವಿಸಲಾಯಿತು.
ಶಾಲೆಯ ಶಿಕ್ಷಕರಾದ ಗೀತಾ ನಾಯ್ಕ, ಪೂರ್ಣಿಮಾ ನಾಯ್ಕ, ಪವಿತ್ರಾ ಆಚಾರಿ ಈ ವೇಳೆ ಹಾಜರಿದ್ದರು.