ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು ಕುಡಿಸುತ್ತಿದೆ. ಗುರುವಾರ ಬೆಳಗ್ಗೆ ನಲ್ಲಿಯಲ್ಲಿ ಬಂದ ನೀರು ಹಿಡಿದ ಬಿಜೆಪಿಗರು ಅದನ್ನು ಪಟ್ಟಣ ಪಂಚಾಯತ ಅಧಿಕಾರಿ-ಸಿಬ್ಬಂದಿಗೆ ತೋರಿಸಿ ಪ್ರತಿಭಟಿಸಿದರು. ಕಲುಷಿತ ನೀರನ್ನು ಬಾಟಲಿಯಲ್ಲಿ ಹಿಡಿದು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಬೀದಿ ದೀಪವೂ ಅಸ್ತವ್ಯಸ್ಥ
`ಎರಡು ವರ್ಷದ ಹಿಂದೆ ಪಟ್ಟಣದ ವಿವಿಧ ಕಡೆ ಬೀದಿ ದೀಪ ಅಳವಡಿಸಲಾಗಿದ್ದು, ರಾತ್ರಿ ವೇಳೆ ಅವು ಸರಿಯಾಗಿ ಬೆಳಗುತ್ತಿಲ್ಲ. ಬೆಲ್ ರಸ್ತೆ, ಶಿರಸಿ ರಸ್ತೆ, ಮುಂಡಗೋಡು ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸುತ್ತ ಅಳವಡಿಸಿದ ದೀಪಗಳು ಪ್ರಯೋಜನಕ್ಕಿಲ್ಲ. ಇನ್ನೂ 50 ಬೀದಿ ದೀಪಗಳ ಅಗತ್ಯವಿದ್ದು, ಅದನ್ನು ಅಳವಡಿಸಿಲ್ಲ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದ್ದು, ಅಧಿಕಾರಿಗಳ ಬೇಜವಬ್ದಾರಿಯಿಂದ ಸಾರ್ವಜನಿಕರಿಗೆ ಸೌಲಭ್ಯ ಸಿಗುತ್ತಿಲ್ಲ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶವ್ಯಕ್ತಪಡಿಸಿದರು.
ಕಾಸು ಕೊಟ್ಟವರಿಗೆ ಸಿಕ್ಕಿಲ್ಲ ಮನೆ!
`ವಸತಿರಹಿತರಿಗಾಗಿ ಮಂಜುನಾಥ ನಗರದಲ್ಲಿ ಜಿ+2 ವಸತಿ ಕಟ್ಟಡ ನಿರ್ಮಿಸಲಾಗುತ್ತಿದೆ. 4-5 ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ಅದಾಗಿಯೂ ಮನೆ ಪಡೆಯಲು ಇಚ್ಚಿಸಿದವರಿಂದ 50 ಸಾವಿರ ಹಣ ಪಡೆದಿದ್ದು, ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡದೇ ಅನ್ಯಾಯ ಮಾಡಲಾಗಿದೆ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ದೂರಿದರು.
ಕಚೇರಿ ಮುಂದೆ ತಮಟೆ ಸದ್ದು!
`ಅವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರು ನೀಡಿದರು ಅಧಿಕಾರದಲ್ಲಿರುವವರಿಗೆ ಕಿವಿ ಕೇಳುತ್ತಿಲ್ಲ’ ಎಂದು ಆರೋಪಿಸಿದ ಬಿಜೆಪಿಗರು ತಮಟೆ ಬಾರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣ ಪಂಚಾಯತ ಕಚೇರಿ ಮುಂದೆಯೂ ತಮಟೆ ಬಾರಿಸುವುದರ ಮೂಲಕ ಅಧಿಕಾರಿಗಳು ಕಚೇರಿ ಬಿಟ್ಟು ಹೊರಬರುವಂತೆ ಮಾಡಿದರು. ಅದಾದ ನಂತರ ಬೀದಿ ದೀಪ, ಕಲುಷಿತ ನೀರು ಹಾಗೂ ಬಡವರ ವಸತಿ ಸಮಸ್ಯೆ ಸೇರಿ ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸಿದರು. `ಕಾಂಗ್ರೆಸ್ ಆಡಳಿತದ ಪಟ್ಟಣ ಪಂಚಾಯತ ಜನರ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.