ಸಿದ್ದಾಪುರ: 70ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಅಪಘಾತವಾಗಿದೆ. ಎಕ್ಸಲ್ ತುಂಡಾದ ಪರಿಣಾಮ ಬಸ್ಸು ಗದ್ದೆಯ ಕಡೆ ವಾಲಿದೆ.
ಗುರುವಾರ ಬೆಳಗ್ಗೆ ಶಿರಸಿ – ಹರಿಶಿ – ಚಂದ್ರಗುತ್ತಿ ಮಾರ್ಗವಾಗಿ ಸಿದ್ದಾಪುರಕ್ಕೆ ಈ ಬಸ್ಸು ಚಲಿಸುತ್ತಿತ್ತು. 50ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಸ್ಸಿನಲ್ಲಿದ್ದರು. ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದರು. ಬಲ್ಲಟ್ಟೆ ಬಳಿ ಬಸ್ಸು ಏಕಾಏಕಿ ಬಲಗಡೆ ವಾಲಿತು. ಅದಾಗಿಯೂ ಬಸ್ಸಿನ ಚಾಲಕ ಅತ್ಯಂತ ನಾಜೂಕಿನಿಂದ ಬಸ್ಸನ್ನು ಗದ್ದೆಯ ದಿಬ್ಬಕ್ಕೆ ಗುದ್ದಿ ನಿಲ್ಲಿಸಿದರು.
ವಿದ್ಯಾರ್ಥಿಗಳು ಹೆಚ್ಚಿದ್ದ ಬಸ್ಸು ಅಪಘಾತವಾಗಿದ್ದರಿಂದ ಶಾಲೆ-ಕಾಲೇಜಿಗೆ ತೆರಳುವವರು ಸಮಸ್ಯೆ ಅನುಭವಿಸಿದರು. ಬಸ್ಸು ಬಿದ್ದಿದ್ದರಿಂದ ಆಘಾತಕ್ಕೆ ಒಳಗಾದ ಪ್ರಯಾಣಿಕರು ಕಿಟಕಿಯಿಂದ ಹಾರಲು ಪ್ರಯತ್ನಿಸಿದರು. ಈ ವೇಳೆ ಯಾರಿಗೂ ಪೆಟ್ಟಾಗಲಿಲ್ಲ. `ಜಿಲ್ಲೆಯಲ್ಲಿ ಬಸ್ಸು ಅಪಘಾತ ಪ್ರಮಾಣ ಹೆಚ್ಚಾಗಿದೆ. ಅಲ್ಲಲ್ಲಿ ಕೆಟ್ಟು ನಿಲ್ಲುವ ಬಸ್ಸಿನಿಂದ ಪ್ರಯಾಣಿಕರು ಹೈರಣಾಗಿದ್ದಾರೆ. ಸುಸಜ್ಜಿತ ಬಸ್ಸುಗಳನ್ನು ಮಾತ್ರ ಪ್ರಯಾಣಕ್ಕೆ ಕಳುಹಿಸಬೇಕು’ ಎಂದು ಅಲ್ಲಿದ್ದವರು ಆಗ್ರಹಿಸಿದರು.