ಕುಮಟಾ: ಗೋಕರ್ಣ ಬಳಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. 80ಕ್ಕೂ ಅಧಿಕ ಹೋಂ ಸ್ಟೇ’ಗಳು ಇಲ್ಲಿದ್ದು ರಸ್ತೆ-ಗೋಮಾಳವನ್ನೆಲ್ಲ ಅವರು ಅತಿಕ್ರಮಿಸಿಕೊಂಡಿದೆ. `ಸಾರ್ವಜನಿಕರಿಗೆ ಆಗುವ ತೊಂದರೆ ಪರಿಗಣಿಸಿ ಇದನ್ನು ತೆರವು ಮಾಡಬೇಕು’ ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯತ ನಿರಂತರವಾಗಿ ಪತ್ರ ಬರೆದರೂ ಕಂದಾಯ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಒಂದು ವಾರದ ಒಳಗೆ ಅನಧಿಕೃತ ಕಟ್ಟಡಗಳನ್ನು ತೆರವು ಮಾಡದೇ ಇದ್ದರೆ ಪಂಚಾಯತನ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಸಮುದ್ರ ಕಿನಾರೆ ಸೇರಿ ವಿವಿಧ ಕಡೆ ಅನಧಿಕೃತ ಹೋಂ ಸ್ಟೇ’ಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಆ ಭಾಗದ ಅನೇಕರು ಗ್ರಾಮ ಪಂಚಾಯತಗೆ ದೂರು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತದ ಸಾಮಾನ್ಯ ಸಭೆಯಲ್ಲಿ ಸಹ ಅನಧಿಕೃತ ಹೋಂ ಸ್ಟೇ’ಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ವಿವರಿಸಿದ್ದಾರೆ. ಈ ಎಲ್ಲಾ ದೂರು ಪರಿಶೀಲಿಸಿದ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದ ಬಗ್ಗೆ ಹೆಸ್ಕಾಂ’ಗೆ ಪ್ರಶ್ನಿಸಿದ್ದಾರೆ. ಅದಾದ ನಂತರ ಜಾಗದ ಗಡಿ ಗುರುತಿನ ಬಗ್ಗೆ ಮಾಹಿತಿ ನೀಡುವಂತೆ ಈಶ್ವರ ಗೌಡ ಅವರು ಭೂ ಮಾಪನಾ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಭೂಮಿ ಅತಿಕ್ರಮಣ ನಡೆದ ಬಗ್ಗೆ ಗ್ರಾಮ ಪಂಚಾಯತದ ಅಧಿಕೃತ ಪತ್ರದಲ್ಲಿ ತಹಶೀಲ್ದಾರರಿಗೆ ಸಹ ಲಿಖಿತವಾಗಿ ತಿಳಿಸಿದ್ದಾರೆ. ಅದಾಗಿಯೂ ಅಕ್ರಮ ನಡೆಸುವವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಅನಧಿಕೃತ ಕಟ್ಟಡಗಳು ತೆರವಾಗಿಲ್ಲ.
ಈ ಹಿನ್ನಲೆ ಪ್ರಸ್ತುತ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರನ್ನು ಭೇಟಿ ಮಾಡಿದ ಗ್ರಾ ಪಂ ಸದಸ್ಯರು `ಅನಧಿಕೃತ ಹೋಂ ಸ್ಟೇ ತೆರವು ಆಗದೇ ಇದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಒಂದು ವಾರದ ಗಡುವುನ್ನು ನೀಡಿದ್ದಾರೆ. `ಈಗಾಗಲೇ ಕಂದಾಯ, ಸಿಆರ್‌ಜಡ್, ಹೆಸ್ಕಾಂ ಸೇರಿ ಎಲ್ಲಾ ಕಡೆ ದೂರು ನೀಡಲಾಗಿದೆ. ಅದಾಗಿಯೂ ಯಾವುದೇ ಕ್ರಮವಾಗಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
`ಅನಧಿಕೃತ ರೆಸಾರ್ಟಿನವರು ಇಕ್ಕಟ್ಟಾದ ರಸ್ತೆಯನ್ನು ಅತಿಕ್ರಮಿಸಿದ್ದಾರೆ. ವಾಹನ ನಿಲುಗಡೆ, ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಹೊರ ರಾಜ್ಯದ ಅನೇಕರು ಇಲ್ಲಿ ನಿಯಮಬಾಹಿರವಾಗಿ ಹೊಟೇಲ್ ನಡೆಸುತ್ತಿದ್ದು, ಅವರ ಹಿನ್ನಲೆ ಬಗ್ಗೆ ಅರಿವಿಲ್ಲ’ ಎಂದು ಗ್ರಾ ಪಂ ಸದಸ್ಯರು ಕಳವಳವ್ಯಕ್ತಪಡಿಸಿದರು. ಸಮಸ್ಯೆ ಆಲಿಸಿದ ಕಲ್ಯಾಣಿ ಕಾಂಬಳೆ `ಒಂದು ವಾರದೊಳಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವೆ’ ಎಂಬ ಭರವಸೆ ನೀಡಿದರು.