ಕುಮಟಾ: ಹೊಸ ವರ್ಷ ಆಚರಣೆಗೆ ಬಹುತೇಕರು ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗಿ ಮೋಜು-ಮಸ್ತಿಯಲ್ಲಿ ತೊಡಗಿರವ ವೇಳೆ ವಿದೇಶಿ ಮಹಿಳೆಯೊಬ್ಬರು ಹನುಮಾನ್ ಚಾಲಿಸ್ ಪಠಿಸುವ ಮೂಲಕ 2025ನ್ನು ಬರಮಾಡಿಕೊಂಡರು!
ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಗೋಕರ್ಣದ ಬಂಕಿಕೊಡ್ಲ ಬಳಿ ಯೋಗರತ್ನ ಎಂಬಾತರು `ಶಂಕರ ಪ್ರಸಾದ ಪೌಂಡೇಶನ್’ ಎಂಬ ಸಂಸ್ಥೆ ನಡೆಸುತ್ತಾರೆ. ಮಂಗಳವಾರ ರಾತ್ರಿ 12ಗಂಟೆಯವರೆಗೂ ಅವರು ತಮ್ಮ ಶಿಷ್ಯರೊಂದಿಗೆ ಹನುಮಾನ್ ಚಾಲಿಸ್ ಪಠಿಸಿದರು. ಅದಾದ ನಂತರ ಮಂತ್ರ ಪಠಣ, ಭಜನೆ ಹಾಗೂ ಭಕ್ತಿ ಸಂಗೀತದ ಕಾರ್ಯಕ್ರಮ ನಡೆಸಿದರು.
ಯೋಗರತ್ನ ಅವರ ಜೊತೆ 15ಕ್ಕೂ ಅಧಿಕ ವಿದೇಶಿಗರು ಭಕ್ತಿ ಭಾವದಲ್ಲಿ ಗಾಯನಗಳನ್ನು ಹಾಡಿದರು. `ಕೆಟ್ಟದನ್ನು ಮರೆತು ಒಳಿತು ಮಾಡುವುದರ ಬಗ್ಗೆ ಯೋಚಿಸೋಣ’ ಎಂದು ಅವರು ಈ ವೇಳೆ ಕರೆ ನೀಡಿದರು. `ಹೊಸ ವರ್ಷದ ಕ್ಷಣಗಳನ್ನು ವ್ಯರ್ಥ ಮಾಡದೇ ಬದುಕುವೆವು’ ಎಂದು ಅಲ್ಲಿ ನೆರೆದಿದ್ದವರು ಶಪಥ ಮಾಡಿದರು.



