ಅಂಕೋಲಾ: ಯಕ್ಷಗಾನದ ಮೇಲಿನ ಅಭಿಮಾನ ಹಾಗೂ ಜಾಗೃತಿ ಸಂದೇಶಕ್ಕಾಗಿ ಅಡಿಗೋಣದ `ಅಕ್ಷರ ಪೌಂಡೇಶನ್’ ಯೋಜನೆಯೊಂದನ್ನು ಪ್ರಕಟಿಸಿದೆ. 90ರ ದಶಕದ ಕಲಾವಿದರನ್ನು ಮತ್ತೆ ವೇದಿಕೆಗೆ ಆಮಂತ್ರಿಸಿ ಅವರ ಮೂಲಕ ಮಕ್ಕಳಿಗೆ ಯಕ್ಷಗಾನ ಪಾತ್ರ ಪರಿಚಯ ನಡೆಸುವ ಪ್ರಯತ್ನ ನಡೆಸಿದೆ.
ಈ ಯೋಜನೆಯ ಮೊದಲ ಭಾಗವಾಗಿ ಜನವರಿ 11ರಂದು ಮೊದಲ ಆಟ ನಡೆಯಲಿದೆ. 90ರ ದಶಕ ಹೆಕ್ಕಮೇಳದ ಕಲಾವಿದರನ್ನು ಒಗ್ಗೂಡಿಸಲಾಗಿದ್ದು, ಅಂಕೋಲಾ ಅಡಿಗೋಣದಲ್ಲಿ ಎಲ್ಲರೂ ಒಟ್ಟಾಗಿ ಯಕ್ಷ ಪಾತ್ರ ನಿಭಾಯಿಸಲಿದ್ದಾರೆ. ಆ ಮೂಲಕ ಹಳೆಯ ನೆನಪುಗಳನ್ನು ಮತ್ತೆ ಮೆಲಕು ಹಾಕಲಿದ್ದಾರೆ. ಈಗಿನ ಖ್ಯಾತ ಯಕ್ಷಗಾನ ಕಲಾವಿದರು ಸಹ ಅವರ ಜೊತೆ ಸೇರಿ ಕುಣಿಯಲಿದ್ದು, ಈ ಯಕ್ಷ ವೇದಿಕೆಗೆ ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿವೆ.
ಅಷ್ಟಾಗಿ ಟಿವಿ-ಇಂಟರ್‌ನೆಟ್ ಭರಾಟೆಗಳಲ್ಲಿದ 90ರ ದಶಕದಲ್ಲಿ ಯಕ್ಷಗಾನವೇ ಮನರಂಜನೆಯ ಮಾಧ್ಯಮ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಹ ಆಗ ಅನೇಕರು ಯಕ್ಷಗಾನವನ್ನು ಆಯ್ದುಕೊಳ್ಳುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಯಕ್ಷಗಾನ ನಡೆಯುತ್ತಿದೆ ಎಂದಾದರೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ರಾತ್ರಿ ಆಟ ಶುರುವಾದರೆ ಬೆಳಗ್ಗೆಯವರೆಗೂ ನಿದ್ರೆಗೆ ಜಾರದೇ ಪ್ರೇಕ್ಷಕರು ಯಕ್ಷ ಸೊಬಗು ಸವಿಯುತ್ತಿದ್ದರು. ಖ್ಯಾತ ಕಲಾವಿದರ ವೇದಿಕೆ ಪ್ರವೇಶವಾದಾಗ ಸಭೆಯ ತುಂಬ ಚಪ್ಪಾಳೆಗಳ ಸುರಿಮಳೆ ತಪ್ಪುತ್ತಿರಲಿಲ್ಲ.
ಆ ದಿನಗಳನ್ನು ಮತ್ತೆ ನೆನಪಿಸುವ ಉದ್ದೇಶ ಅಕ್ಷರ ಪೌಂಡೇಶನ್ ಅವರದ್ದು. ಯಕ್ಷಸಿರಿ ಎಂದು ಗುರುತಿಸಿಕೊಂಡಿರುವ ಭಾಗವತ ಬೀರಣ್ಣ ಮಾಸ್ತರ್ ಅಡಿಗೋಣ ಅವರ ರಚನೆಯಲ್ಲಿ ಇದೀಗ ಯಕ್ಷ ಪ್ರದರ್ಶನ ನಡೆಯಲಿದೆ. ಹೊಸಬಣ್ಣ ಮಾಸ್ತರ್ ಕುದ್ರಗಿ, ಅನಂತ ಹಾವಗೋಡಿ ಗೋಕರ್ಣ, ಬೀರಪ್ಪ ಗೌಡ ಭಾವಿಕೋಡ್ಲ, ನಾರಾಯಣ ನಾಯ್ಕ ಭಾವಿಕೇರಿ, ಶಿವಾನಂದ ನಾಯಕ ಮತ್ತು ದೇವಾನಂದ ನಾಯಕರ ಜೋಡಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕೆ ಎಚ್ ನಾಯಕ ಧಾರವಾಡ ಅವರ ಮುಮ್ಮೇಳಕ್ಕೆ ಬೊಮ್ಮಯ ಗಾಂವಕರ ಅವರ ಹಿಮ್ಮೇಳದ ಕೂಡುವಿಕೆಯಲ್ಲಿ `ಶ್ರೀಕೃಷ್ಣ ವಿವಾಹ’ ಎಂಬ ಯಕ್ಷಗಾನ ಆಯೋಜಿಸಲಾಗಿದೆ.