ಕಾರವಾರ: `ಜನವರಿ 13ಕ್ಕೆ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ನಡೆಯಲಿದ್ದು, ಪ್ರವಾಸಿಗರ ಸುರಕ್ಷತೆಗೆ ಗಮನ ಕೊಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮುಖ್ಯಮಂತ್ರಿ ಕಚೇರಿಗೆ ಪತ್ರ ರವಾನಿಸಿದ್ದಾರೆ.
`ಕೆಲ ವರ್ಷದ ಹಿಂದೆ ಕೂರ್ಮಗಡ ಜಾತ್ರಾ ಅವಧಿಯಲ್ಲಿ ದೋಣಿ ಮುಳುಗಡೆಯಿಂದ ಹಲವರು ಸಾವನಪ್ಪಿದ್ದರು. ಅದಾದ ನಂತರ ಜಾತ್ರೆಗೆ ಬರುವ ಭಕ್ತರಿಗೆ ಲೈಫ್ ಜಾಕೆಟ್ ಕಡ್ಡಾಯ ಎಂಬ ನಿಯಮ ಮಾಡಲಾಗಿದ್ದು, ಆ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಆಗ್ನೇಲ್ ರೋಡ್ರಿಗಸ್ ವಿವರಿಸಿದ್ದಾರೆ. `ಕಳೆದ ವರ್ಷ ಜಾತ್ರಾ ಅವಧಿಯಲ್ಲಿ ಬೋಟಿನಲ್ಲಿ ಹೆಚ್ಚಿನ ಪ್ರಮಾಣದ ಭಕ್ತರನ್ನು ಕರೆದೊಯ್ಯಲಾಗಿದೆ. ಆದರೆ, ಭಕ್ತರ ಸುರಕ್ಷತೆಗೆ ಕಾಳಜಿವಹಿಸಿರಲಿಲ್ಲ. ಈ ಬಾರಿ ಹಾಗಾಗದಂತೆ ಎಚ್ಚರಿಕೆವಹಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
`5 ವರ್ಷದೊಳಗಿನ ಮಕ್ಕಳು ದ್ವೀಪಕ್ಕೆ ತೆರಳುವುದು ನಿಷೇಧ ಎಂದು ಕಳೆದ ವರ್ಷ ಆದೇಶಿಸಲಾಗಿತ್ತು. ಆದರೆ, ಆ ಆದೇಶ ಜಾರಿಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಈ ಬಾರಿ ಯಾವ ಆದೇಶವೂ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಾಗೇಶ್ ಹುಲಸ್ವಾರ, ಉಸ್ಮಾನ್ ಮೂಜಿಬ್ ಷರೀಫ್, ಶೇಖರ್ ಅಂಬಿಗ, ನಾರಾಯಣ ಅಂಬಿಗ, ಈಶ್ವರ್ ಅಂಬಿಗ ಮುಖ್ಯಮಂತ್ರಿ ಕಚೇರಿಗೆ ಪತ್ರ ರವಾನಿಸಿದ್ದು, ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಈ ಬಗ್ಗೆ ವಿವರಣೆ ನೀಡಿದ ವಿಡಿಯೋ ಇಲ್ಲಿ ನೋಡಿ..