ಶಿರಸಿ: ಶಿರಸಿಯಿಂದ ಬನವಾಸಿಗೆ ಬಿಡುವ ಬಸ್ಸಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಗತ್ಯ ಆಸನಗಳಿಲ್ಲ. ಬಸ್ಸಿನ ಹಿಂಬಾಗದ ಸೀಟುಗಳನ್ನು ತೆಗೆದಿರುವುದರಿಂದ ಅನೇಕ ಪ್ರಯಾಣಿಕರು ಬಸ್ಸಿನ ಅಡಿಭಾಗದ ಹಲಿಗೆಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ!
ಶಿರಸಿ-ಬನವಾಸಿ ಮಾರ್ಗದ ಬಸ್ಸಿನಲ್ಲಿ ಒಟ್ಟು 33 ಆಸನಗಳಿರಬೇಕು. ಆದರೆ, ಚಾಲಕ-ನಿರ್ವಾಹಕರ ಆಸನವೂ ಸೇರಿ ಈ ಬಸ್ಸಿನಲ್ಲಿ 27 ಆಸನಗಳು ಮಾತ್ರ ಇವೆ. ಹೀಗಾಗಿ ತುಂಬಿದ ಬಸ್ಸಿನಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಇತರೆ ಪ್ರಯಾಣಿಕರು ಬಸ್ಸಿನ ಅಡಿ ಹಲಿಗೆಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದಾರೆ.
ಪುರುಷ ಪ್ರಯಾಣಿಕರು ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದು, ಈ ಬಗ್ಗೆ ನಿಗಮಕ್ಕೂ ಪ್ರಯಾಣಿಕರು ದೂರು ಸಲ್ಲಿಸಿದ್ದಾರೆ.
ಕಳೆದ 15 ದಿನಗಳಿಂದ ಕೊನೆಯ ಆಸನಗಳನ್ನು ತೆಗೆದ ಬಸ್ಸನ್ನು ಬನವಾಸಿಗೆ ಬಿಡಲಾಗುತ್ತಿದೆ. `ಪ್ರಯಾಣಿಕರಿಗೆ ಅನಾನುಕೂಲತೆಯಾಗಿರುವುದು ಗಮನಕ್ಕೆ ಬಂದಿದೆ. ಆ ಬಸ್ಸಿನ ಆಸನಗಳು ತುಂಡಾಗಿದ್ದು, ಅದನ್ನು ರಿಪೇರಿಗೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಬಸ್ಸಿಗೆ ಸೂಕ್ತ ಆಸನಗಳನ್ನು ಒದಗಿಸಲಾಗುತ್ತದೆ’ ಎಂದು ಡಿಪೋ ಮ್ಯಾನೇಜರ್ ಸರ್ವೇಶ್ ತಿಳಿಸಿದರು.