ಕಾರವಾರ: ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ರಸ್ತೆಗೆ ಅಡ್ಡಲಾಗಿರುವ ಹಂಪ್ ಅಪಘಾತಕ್ಕೆ ಕಾರಣವಾಗಿದೆ. ಎರಡು ಸ್ಕೂಟಿಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಸಾಯಿಕಟ್ಟಾದ ಸಿಮ್ರಾನ್ ಸಯ್ಯದ್ (20) ಅವರು ಜನವರಿ 6ರಂದು ಕೋಡಿಭಾಗದ ಅರ್ಜುನ್ ಟಾಕೀಸ್ ಬಳಿಯಿಂದ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಆ ಸ್ಕೂಟಿಯಲ್ಲಿ ಸಾಯಿಕಟ್ಟಾದ ತಸ್ಸಿಮ್ ಸಯ್ಯದ ಹಿಂದೆ ಕುಳಿತಿದ್ದರು.
ಆ ರಸ್ತೆಯಲ್ಲಿನ ಹಂಪ್ ಹಾರಿದ ಪರಿಣಾಮ ಸಿಮ್ರಾನ್ ಸಯ್ಯದ್ ಅವರ ಸ್ಕೂಟಿ ನಿಯಂತ್ರಣ ತಪ್ಪಿದ್ದು, ಎದುರಿನಿಂದ ಇನ್ನೊಂದು ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದ ಹೇಮಂತ ಪರುಳೆಕರ್ ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಹೇಮಂತ ಅವರು ಪೊಲೀಸ್ ಅಧೀಕ್ಷಕರ ಕಚೇರಿ ಕಡೆ ತಿರುವು ಪಡೆಯುತ್ತಿದ್ದು, ಈ ವೇಳೆ ನಡೆದ ಅಪಘಾತದಿಂದ ಹೇಮಂತ ಅವರ ಸ್ಕೂಟಿಯ ಹಿಂಬದಿ ಸವಾರರಾಗಿದ್ದ ದಾದಾಫಿರ್ ಅಬ್ದುಲ್ ಸಹ ಗಾಯಗೊಂಡರು.
ಈ ಎರಡು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸಿಮ್ರಾನ್ ಸಯ್ಯದ್, ತಸ್ಸಿಮ್ ಸಯ್ಯದ, ಹೇಮಂತ ಪರುಳೆಕರ್ ಹಾಗೂ ದಾದಾಫಿರ್ ಅಬ್ದುಲ್ ಮೈ-ಕೈ’ಗೆ ಪೆಟ್ಟು ಮಾಡಿಕೊಂಡರು. ಈ ಬಗ್ಗೆ ದಾದಾಫಿರ್ ಅಬ್ದುಲ್ ಪೊಲೀಸ್ ಪ್ರಕರಣ ದಾಖಲಿಸಿದರು.