ಮುಂಡಗೋಡ: ಗ್ರಾ ಪಂ ಸದಸ್ಯೆ ಅಕ್ಕಮ್ಮ ಅವರನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅಕ್ಕಮ್ಮ ಅವರ ಪತಿ ಬಸವರಾಜ ಮೇಲಿನಮನಿ’ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2020ರಲ್ಲಿ ಮುಂಡಗೋಡ ಪಾಳಾ ಗ್ರಾಮ ಪಂಚಾಯತದ 3ನೇ ವಾರ್ಡಿಗೆ ಅಕ್ಕಮ್ಮ ಅವರು ಸ್ಪರ್ಧಿಸಿದ್ದರು. ಗೆಲುವಿನ ನಂತರ ಅವರು ತಡವಾಗಿ ಮನೆಗೆ ಬರುತ್ತಿದ್ದರು. ಇದರಿಂದ ಅಕ್ಕಮ್ಮ ಪತಿ ಬಸವರಾಜ ಮೇಲಿನಮನಿ ಪತ್ನಿ ಮೇಲೆ ಸಂಶಯ ಕಾಡುತ್ತಿತ್ತು. ಈ ಅನುಮಾನ ಗಾಡವಾಗಿ ಬೆಳೆದಿದ್ದು, ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. `ಗ್ರಾ ಪಂ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಕ್ಕಮ್ಮ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂಬ ಸುದ್ದಿಯನ್ನು ಬಸವರಾಜ ಮೇಲಿನಮನಿಯಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
2022ರ ಅಗಸ್ಟ 2ರಂದು ಅಕ್ಕಮ್ಮ ಅವರ ತಲೆಗೆ ಕೊಡಲಿಯಿಂದ ಹೊಡೆದ ಬಸವರಾಜ ಮೇಲಿನಮನಿ, ರಕ್ತದ ಮೊಡವಿನಲ್ಲಿ ಬಿದ್ದಿದ್ದ ಅಕ್ಕಮ್ಮ ಅವರ ಕುತ್ತಿಗೆಗೆ ಸೀರೆ ಕಟ್ಟಿ ಎಳೆದಿದ್ದ. ಅತ್ಯಂತ ವಿಕೃತವಾಗಿ ಅಕ್ಕಮ್ಮ ಅವರ ಕೊಲೆ ಮಾಡಿ ನಂತರ ಶವವನ್ನು ಮನೆಯ ಕೋಣೆಯಲ್ಲಿ ಅಡಗಿಸಿಟ್ಟಿದ್ದ. ರಾತ್ರಿ ಮಕ್ಕಳಿಗೆ ಊಟ ಬಡಿಸಿ ಅವರು ಮಲಗಿದ ನಂತರ ಶವವನ್ನು ವರಂಡಾಗೆ ತಂದು, ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದರೆ, ಆತ ಆ ವೇಳೆ ಸಾಯಲಿಲ್ಲ.
ಕೊಲೆ ಹಾಗೂ ಆತ್ಮಹತ್ಯೆ ಪ್ರಯತ್ನ ನಡೆಸಿದ ಬಸವರಾಜ ಮೇಲಿನಮನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ನಿರೀಕ್ಷಕ ಸಿದ್ದಪ್ಪ ಸಿಮಾನಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿ ಕರಿಬಸಪ್ಪ ಇಂಗಳಸೂರು ಹಾಗೂ ತಿರುಪತಿ ಚೌಡಣ್ಣನವರ್ ಅವರು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಆರೋಪಿತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಾದಿಸಿದರು.
ವಿಚಾರಣೆ ನಡೆಸಿದ ಶಿರಸಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಅವರು ಬಸವರಾಜ ಮೇಲಿನಮನಿ’ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. 25 ಸಾವಿರ ರೂ ದಂಡದ ಜೊತೆ ಮಕ್ಕಳಿಗೆ 50 ಸಾವಿರ ರೂ ಪರಿಹಾರ ಕೊಡಬೇಕು ಎಂದು ಆದೇಶಿಸಿದರು.



