ಕಾರವಾರ: ಕಾಳಿ ಅರಣ್ಯ ಮೀಸಲು, ಶರಾವತಿ ಕಣಿವೆ ಹಾಗೂ ಅತ್ತಿವೇರಿ ಪಕ್ಷಿಧಾಮವೂ ಪರಿಸರ ಸೂಕ್ಷ್ಮ ವಲಯಗಳಗಳಾಗಿದ್ದು, ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಕಡ್ಡಾಯ. `ಕಂದಾಯ ಇಲಾಖೆ ಸಹ ಅನುಮತಿ ನೀಡುವ ಮೊದಲು ಅರಣ್ಯಾಧಿಕಾರಿಗಳ ಅಭಿಪ್ರಾಯ ಪಡೆಯಬೇಕು’ ಎಂದು ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. `ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯ ಪ್ರದೇಶವಿದ್ದು, ಪಶ್ಚಿಮ ಘಟ್ಟದಲ್ಲಿ ವಿಶೇಷ ಜೀವ ವೈವಿಧ್ಯತೆ ಇದೆ. ಇವುಗಳನ್ನು ಉಳಿಸಿ ರಕ್ಷಿಸುವಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಹಲವು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿಯನ್ನು ಸರ್ಕಾರ ಎಂದು ದಾಖಲಿಸಿದ್ದು, ಇಂತಹ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಪರಿಶೀಲಿಸಬೇಕು’ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಸಭೆಯಲ್ಲಿ ಹೇಳಿದರು.