ಶಿರಸಿ: ಹೈಟೆಕ್ ಆಸ್ಪತ್ರೆ ಹಣಕಾಸಿನ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಉಪವಾಸದ ಮೂಲಕ ಧರಣಿ ನಡೆಸುವುದು ಖಚಿತವಾಗಿದೆ. ಈ ಮೊದಲೇ ಘೋಷಿಸಿದಂತೆ ಜನವರಿ 13ರಂದು ಅವರು ಗಾಂಧೀಜಿಯವರನ್ನು ನೆನೆದು ಉಪವಾಸ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿರಸಿ ನಗರದಲ್ಲಿ ಮೆರವಣಿಗೆ ನಡೆಸಿ ಆಸ್ಪತ್ರೆ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ಆಸ್ಪತ್ರೆ ಗೊಂದಲ ಬಗೆಹರಿಸುವುದಕ್ಕಾಗಿ ಒಂದು ವಾರದ ಗಡುವು ನೀಡಿದ್ದ ಅನಂತಮೂರ್ತಿ ಹೆಗಡೆ ಇದೀಗ `ತಾನು ಉಪವಾಸ ನಡೆಸುವ ಸ್ಥಳಕ್ಕೆ ಬಂದು ಶಾಸಕರು ಗೊಂದಲ ಬಗೆಹರಿಸಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಆಸ್ಪತ್ರೆಗೆ ಇಲ್ಲ ಭೀಮಬಲ!
ಸುದ್ದಿಗಾರರ ಜೊತೆ ಮಾತನಾಡಿದ ಅನಂತಮೂರ್ತಿ ಹೆಗಡೆ `ಹೈಟೆಕ್ ಆಸ್ಪತ್ರೆಗೆ ಈಗಾಗಲೇ 112ಕೋಟಿ ರೂ ಅನುದಾನ ಮಂಜೂರಿಯಾಗಿ ಕೆಲಸ ನಡೆಯುತ್ತಿದೆ. ಶಾಸಕ ಭೀಮಣ್ಣ ನಾಯ್ಕ 44 ಕೋಟಿ ರೂ ಅನುದಾನ ತಂದಿರುವುದಾಗಿ ಹೇಳುತ್ತಾರೆ. ಯಾರು ಶಾಸಕರಾಗಿದ್ದರೂ ಈ ಹಣ ಬರುತ್ತಿತ್ತು. ಇದರಲ್ಲಿ ಭೀಮಣ್ಣ ನಾಯ್ಕ ಅವರ ಪ್ರಯತ್ನ ಏನು ಇಲ್ಲ’ ಎಂದು ಅವರು ಹೇಳಿದ್ದಾರೆ. `ಯಂತ್ರೋಪಕರಣ ಖರೀದಿಗೆ 30 ಕೋಟಿ ರೂ ಹಣ ಬೇಕಿದ್ದು, ಅದನ್ನು ತರಲು ಶಾಸಕರು ಪ್ರಯತ್ನಿಸಬೇಕು. ಈಗಾಗಲೇ ಮಂಜೂರಾದ ಹಣ ತರುವುದು ಅವರ ಕೆಲಸವಲ್ಲ’ ಎಂದರು.
ಬೆoಬಲ ನೀಡಲು ಬದ್ಧ!
`ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಇಲ್ಲ. ಕ್ಷೇತ್ರದ ಜನರಿಗಾಗಿ ಆಸ್ಪತ್ರೆ ಕೇಳುತ್ತಿದ್ದು, ನಮ್ಮ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ಶಾಸಕರಿಗೆ ಬೆಂಬಲ ನೀಡಲು ಬದ್ಧ. ಅವರ ಜೊತೆ ಹೋರಾಡಲು ಸಿದ್ಧ’ ಎಂದು ಅನಂತಮೂರ್ತಿ ಹೆಗಡೆ ಘೋಷಿಸಿದರು.
ನಿಂದಿಸುವವರ ವಿರುದ್ಧ ಗರಂ!
`ಸತ್ಯ ಹೇಳಿ ಎಂದು ಆಗ್ರಹಿಸುವ ಹೋರಾಟಗಾರರನ್ನು ಕೆಡಗಣಿಸಲಾಗುತ್ತಿದೆ. ಪಕ್ಷ, ಜಾತಿಗೆ ಸೀಮಿತಗೊಳಿಸಿ ವೈಯಕ್ತಿಕವಾಗಿ ನಿಂದಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ ಎಂದದವರು ಹೇಳಿದರು.