ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು ನಿಯಮಬಾಹಿರವಾಗಿ ಲಾರಿ ಜಪ್ತು ಮಾಡಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ ಎಸ್ ಮಣಿ ಹಾಗೂ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಕ್ರೋಶವ್ಯಕ್ತಪಡಿಸಿದ್ದಾರೆ. ಇದರೊಂದಿಗೆ `ಪ್ರಕರಣ ದಾಖಲಾದ ನಂತರವೂ ಯಲ್ಲಾಪುರ ಪೊಲೀಸರು ಕಾನೂನು ಪಾಲಿಸಿಲ್ಲ’ ಎಂದವರು ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಯಲ್ಲಾಪುರದ ಮಹಮದ್ ರಫೀಕ್ ಅವರು ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದಿAದ 19.58 ಲಕ್ಷ ರೂ ಸಾಲ ಪಡೆದು ಲಾರಿ ಖರೀದಿಸಿದ್ದರು. ಡಿ 23ರಂದು ಲಾರಿಯನ್ನು ಹುಬ್ಬಳ್ಳಿಯ ಗ್ಯಾರೇಜ್ ಒಂದರಲ್ಲಿ ದುರಸ್ತಿಗೆ ಬಿಡಲಾಗಿತ್ತು. ಈ ವೇಳೆ ಆಗಮಿಸಿದ ಸಹಕಾರಿ ಸಂಘದ ಸಿಬ್ಬಂದಿ ಲಾರಿ ವಶಕ್ಕೆ ಪಡೆದಿದ್ದಾರೆ. ಅದಾದ ನಂತರ ಸೊಸೈಟಿ ಸಿಬ್ಬಂದಿ ಮನೆಯಲ್ಲಿ ಲಾರಿಯಿರಿಸಿ, ಅದರ ಚಕ್ರಗಳನ್ನು ಕದ್ದಿದ್ದಾರೆ’ ಎಂದು ದೂರಿದರು.
`ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಮೊದಲು ಸ್ವೀಕರಿಸಿರಲಿಲ್ಲ. ಬಳಿಕ ದೂರು ಸ್ವೀಕರಿಸಿದರೂ ಸೂಕ್ತ ವಿಚಾರಣೆ ನಡೆಸಿಲ್ಲ. ಲಾರಿಯ ಟಯರ್ ತೆಗೆದ ಜಾಗದಲ್ಲಿ ಪಂಚನಾಮೆ ನಡೆಸಿಲ್ಲ. ಹೀಗಾಗಿ ಸರಿಯಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ. ಈಗಲೂ ಕ್ರಮವಾಗದೇ ಇದ್ದರೆ ಯಲ್ಲಾಪುರ ಪೊಲೀಸ್ ಠಾಣೆಯ ಮುಂಭಾಗ ರಾಜ್ಯ ಲಾರಿ ಮಾಲೀಕರ ಸಂಘ ಪ್ರತಿಭಟಿಸಲಿದೆ’ ಎಂದವರು ಎಚ್ಚರಿಸಿದರು.
ಲಾರಿ ಸಂಘದ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡು, ಕಿರಣ ನಾಯ್ಕ, ಶ್ರೀಕೃಷ್ಣ, ನೂರ್ ಭಾಷಾ, ಪ್ರಶಾಂತನಾಯ್ಕ, ದಿಲೀಪ ಕುಮಾರ, ಸುಜಯ ಮರಾಠಿ, ಕ್ವಾಜಾ ಅಕ್ತರ ಮಹಮದ್ ರಫೀಕ್ ಇದ್ದರು.
ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿ ನೋಡಿ..