ಹೊಸ ವರ್ಷದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಮೊಬೈಲಿಗೆ ಉಚಿತ ರಿಚಾರ್ಜ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ ಅನೇಕ ವಾಟ್ಸಪ್ ಗುಂಪುಗಳಲ್ಲಿ ಈ ವಿಷಯ ಹರಿದಾಡುತ್ತಿದೆ. `ಮೊಬೈಲ್ ರಿಚಾರ್ಜ ಮಾಡಿಕೊಳ್ಳಲು ಲಿಂಕ್ ಒತ್ತಿ’ ಎಂದು ಸಂದೇಶದಲ್ಲಿದ್ದು, ಆ ಲಿಂಕ್ ಒತ್ತಿದ ನಂತರ ಈ ಸಂದೇಶವನ್ನು ಇನ್ನಷ್ಟು ಜನರಿಗೆ ರವಾನಿಸುವಂತೆ ಸೂಚಿಸಲಾಗುತ್ತದೆ. ಎಲ್ಲಾ ಪ್ರಯತ್ನದ ನಂತರವೂ ಮೊಬೈಲ್ ರಿಚಾರ್ಜ ಮಾತ್ರ ಆಗುವುದಿಲ್ಲ. ಹೀಗಾಗಿ ಉಚಿತ ಮೊಬೈಲ್ ರಿಚಾರ್ಜ ಈ ಸುದ್ದಿ ಸತ್ಯವಲ್ಲ!
ಇನ್ನೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಥಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ. ತಮ್ಮ ಹೆಸರಿನಲ್ಲಿ ಇಂಥಹದೊAದು ಸುದ್ದಿ ಹರಿದಾಡುತ್ತಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೂ ಅರಿವಿಲ್ಲ. ಅದಾಗಿಯೂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಸಂದೇಶ ಹರಿದಾಡುತ್ತಿದೆ. ಲಿಂಕ್ ಒತ್ತಿದವರಿಗೆ ಸಿದ್ದರಾಮಯ್ಯ ಅವರ ಫೋಟೋ ಸಹ ಕಾಣುತ್ತಿದೆ. `ಉಚಿತ ರೀಚಾರ್ಜ ಪಡೆಯಲು ಈ ಲಿಂಕ್’ನ್ನು ಇನ್ನಷ್ಟು ಜನರಿಗೆ ಶೇರ್ ಮಾಡಿ’ ಎಂಬ ಸಂದೇಶ ಕಾಣುತ್ತಿದ್ದು, `ಇದು ಸತ್ಯ’ ಎಂದು ಭಾವಿಸಿ ಅನೇಕರು ವಿವಿಧ ವಾಟ್ಸಪ್ ಗುಂಪುಗಳಿಗೆ ಆ ಸಂದೇಶವನ್ನು ರವಾನಿಸುತ್ತಿದ್ದಾರೆ.
ಇನ್ನೂ ಕೆಲವರು `ನನಗೆ ಈ ಹಣ ಸಿಕ್ಕಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಆ ರೀತಿ ಕಮೆಂಟ್ ಮಾಡಿದ ಖಾತೆಗಳು ಅಸಲಿಯಲ್ಲ. ಈ ಬಗೆಯ ಸಂದೇಶಗಳನ್ನು ಒಪ್ಪಿ ಪುಕ್ಕಟೆ ಹಣ ಸಿಗುತ್ತದೆ ಎಂದು ಮುಂದುವರೆದರೆ ಸೈಬರ್ ದಾಳಿಯ ಸಾಧ್ಯತೆ ಹೆಚ್ಚಿದೆ. ಉಚಿತ ರಿಚಾರ್ಜ ಆಸೆಗೆ ಬಿದ್ದು ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ಜನ ಇಂಥವುಗಳಿAದ ದೂರವಿರುವುದು ಒಳಿತು.