ಯಲ್ಲಾಪುರ: ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುತ್ತಿರುವ ಮುಖ್ಯಾಧಿಕಾರಿ ಸುನೀಲ ಗಾವಡೆ ವಿರುದ್ಧ ಪ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಹೇಳಿದಾಗ ಭರವಸೆ ನೀಡಿ ನಂತರ ಅದನ್ನು ಮರೆತುಬಿಡುವ ವಿಧಾನವನ್ನು ಖಂಡಿಸಿದರು.
ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಪ ಪಂ ಸದಸ್ಯ ಸತೀಶ ನಾಯ್ಕ, ಸಯ್ಯದ ಕೈಸರ್, ಶ್ಯಾಮಲಿ ಪಾಠಣಕರ್ ಹಾಗೂ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಭಟ್ಟ ಬಹಿಷ್ಕರಿಸಿದರು. ಪಟ್ಟಣ ಪಂಚಾಯತ ಅಧಿಕಾರಿಗಳ ಆಡಳಿತ ವೈಖರಿ ಬಗ್ಗೆ ನಾಲ್ಕು ತಿಂಗಳಿನಿoದ ಪ್ರತಿಭಟಿಸುತ್ತಿದ್ದು, ಅವರ ನಡವಳಿಕೆಯಲ್ಲಿ ಬದಲಾವಣೆ ಆಗದ ಕಾರಣ ಸಭೆ ಬಹಿಷ್ಕರಿಸುವುದಾಗಿ ಸತೀಶ ನಾಯ್ಕ ಹೇಳಿದರು.
`ಹಿತ್ಲಕಾರಗದ್ದೆಯ ದಾತ್ರಿ ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಮುನ್ನ ಆ ಲೇಔಟ್’ನ್ನು ಪಟ್ಟಣ ಪಂಚಾಯತಗೆ ಹಸ್ತಾಂತರಿಸಿಕೊಳ್ಳಲಾಗಿದೆ. ಕುಡಿಯುವ ನೀರು, ಉದ್ಯಾನವನ ಸೇರಿ ಎಲ್ಲಾ ಸೌಕರ್ಯ ಪರಿಶೀಲಿಸಿ ಲೇಔಟ್ ಹಸ್ತಾಂತರ ಮಾಡಿಕೊಳ್ಳಬೇಕಿದ್ದು ಈ ವಿಷಯದಲ್ಲಿ ಅಧಿಕಾರಿಗಳು ಎಡವಿದ್ದಾರೆ. ಪ್ರಸ್ತುತ ಅಲ್ಲಿ ವಾಸಿಸುವ ಮಂಜುನಾಥ ಭಟ್ಟ ಅವರ ಪ್ರತಿಭಟನೆ ನಂತರ ಅವರಿಗೆ ಕುಡಿಯುವ ನೀರು ಪೂರೈಸುವ ಭರವಸೆಯನ್ನು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಡಿದ್ದು, ಇದಕ್ಕೆ ಸಾರ್ವಜನಿಕ ತೆರಿಗೆ ಹಣ ವೆಚ್ಚ ಮಾಡಲು ವಿರೋಧವಿದೆ’ ಎಂದವರು ಹೇಳಿದರು.
`ಪಟ್ಟಣ ಪಂಚಾಯತದಲ್ಲಿ ಸದಸ್ಯರ ಗಮನಕ್ಕೆ ತರದೇ ಕೆಲ ಕ್ರಿಯಾ ಯೋಜನೆಗಳನ್ನು ಮಾಡಲಾಗಿದೆ. ಯಾವ ಕೆಲಸಕ್ಕೆ ತೆರಳಿದರೂ ಇಲ್ಲಿ ನಾಳೆ ಬನ್ನಿ ಎನ್ನುತ್ತಿದ್ದು, ಪ ಪಂ ಸದಸ್ಯರಿಗೆ ಜನ ಬಯ್ಯುತ್ತಿದ್ದಾರೆ. ಶಾಸಕರು ತಕ್ಷಣ ಪಟ್ಟಣ ಪಂಚಾಯತ ಆಡಳಿತದ ಕಡೆ ಗಮನಕೊಡಬೇಕು’ ಎಂದು ಹಲವು ಸದಸ್ಯರು ಆಗ್ರಹಿಸಿದರು. ಕೆಲ ಸದಸ್ಯರು ಸಭೆ ಬಹಿಷ್ಕರಿಸಿದ ಕಾರಣ ಸಭೆಯನ್ನು ಮುಂದೂಡಲಾಯಿತು.