ಕುಮಟಾ: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಯಾಂತ್ರಿಕೃತ ದೋಣಿ ಮುಳುಗಡೆಯಾಗಿದೆ. ಮೀನು ಹಿಡಿಯುತ್ತಿದ್ದ ನಾಲ್ವರು ತುಸು ದೂರದವರೆಗೆ ಈಜಿ ಜೀವ ಉಳಿಸಿಕೊಂಡಿದ್ದಾರೆ. ಅಪಾಯದಲ್ಲಿದ್ದವರನ್ನು ನೋಡಿದ ಇನ್ನೊಂದು ಬೋಟಿನವರು ಅವರನ್ನು ದಡಕ್ಕೆ ತಂದು ಬಿಟ್ಟರು.
ಗೋಕರ್ಣ ಬಳಿಯ ಗಂಗೆಕೊಳ್ಳದಿoದ 25 ನಾಟಿಕಲ್ ದೂರದಲ್ಲಿ ಗುರುವಾರ ಮುಂಜಾನೆ ವ್ಯಾಪಕ ಪ್ರಮಾಣದಲ್ಲಿ ಗಾಳಿ ಬೀಸಿತು. ಪರಿಣಾಮ ಅಲ್ಲಿದ್ದ ದೋಣಿ ಮುಗುಚಿ ಬಿದ್ದಿದ್ದು, ನೀರಿನಲ್ಲಿ ಮುಳುಗಿತು. ಈ ವೇಳೆ ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಹಾರಿದರು. ಸಂದೀಪ ತಾಂಡೇಲ್, ರಾಜು ಕಾಂಬಳೆ, ಪ್ರಶಾಂತ ಮೆಹ್ತಾ ಹಾಗೂ ಸೃಜನ್ ಕವಣೇಕರ ಈಜಲು ಶುರು ಮಾಡಿದರು. ಇದರಿಂದ ಅವರ ತಲೆಗೆ ದೋಣಿ ಬಡಿಯುವುದರಿಂದ ಪಾರಾದರು.
ಆ ಮೀನುಗಾರರು ಅಪಾಯಕ್ಕೆ ಸಿಲುಕಿರುವುದನ್ನು ಮಂಗಳೂರಿನ ಓಸಿಯನ್ ಬ್ಲೂ ಬೋಟಿನವರು ಗಮನಿಸಿದರು. ನೀರಿನಲ್ಲಿದ್ದವರನ್ನು ಅವರು ತಮ್ಮ ಬೋಟಿಗೆ ಹತ್ತಿಸಿಕೊಂಡರು. ನಂತರ ಗಂಗೆಕೊಳ್ಳದ ಶ್ರೀಲೀಲಾ ಬೋಟು ಎದುರಾಗಿದ್ದು, ಆ ನಾಲ್ವರನ್ನು ಅವರು ದಡಕ್ಕೆ ತಂದು ಮುಟ್ಟಿಸಿದರು. ಈ ದುರಂತದಲ್ಲಿ ಆರು ಲಕ್ಷ ರೂ ಮೌಲ್ಯದ ದೋಣಿ ಜೊತೆ 8 ಲಕ್ಷ ರೂ ಮೌಲ್ಯದ ಮೀನುಗಳು ಸಮುದ್ರ ಪಾಲಾಗಿದೆ.