ಯಲ್ಲಾಪುರ: ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರ ಮೇಲೆಯೂ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ.
ಗುರುವಾರ ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಅವರ ಅಪಹರಣವಾಗಿದ್ದು, ದುಷ್ಕರ್ಮಿಗಳು 30 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. 18 ಲಕ್ಷ ರೂ ಪಾವತಿಸಿದ ನಂತರ ಎಚ್ಚರಿಕೆ ನೀಡಿ ಅವರನ್ನು ಬಿಟ್ಟು ತೆರಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಕ್ರವಾರವೇ ನಾಲ್ವರನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿರುವ ಮಾಹಿತಿ ಹಿನ್ನಲೆ ಮುಂಡಗೋಡು ಪೊಲೀಸರು ಕಲಘಟಗಿಯಿಂದ ದುಷ್ಕರ್ಮಿಗಳನ್ನು ಬೆನ್ನತ್ತಿದ್ದರು. ಇತ್ತ ಯಲ್ಲಾಪುರ ಪೊಲೀಸರು ಡೌಗಿನಾಳದ ಬಳಿ ಆ ತಂಡದವರನ್ನು ಅಡ್ಡಗಟ್ಟಿದರು.
ಶನಿವಾರ ನಸುಗಿನ 4.30ಕ್ಕೆ ಕಾರಿನಲ್ಲಿದ್ದ ಐದು ಡಕಾಯಿತರಿಗೂ ಶರಣಾಗುವಂತೆ ಪೋಲೀಸರು ತಾಕೀತು ಮಾಡಿದರು. ಇದಕ್ಕೆ ಒಪ್ಪದ ದುಷ್ಕರ್ಮಿಗಳು ಪೊಲೀಸರ ಕಡೆ ಕಲ್ಲು ಬೀಸಿದರು. ಚಾಕು, ಕಾರದಪುಡಿಗಳಿಂದ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದು ಬೆದರಿಸಿದರು.
ಅದಕ್ಕೂ ಬಗ್ಗದೇ ಇದ್ದಾಗ ಆರೋಪಿತರ ಕಾಲಿಗೆ ಗುಂಡು ಹಾರಿಸಿದರು. ಆಗ ಐವರು ಆರೋಪಿತರು ಸಿಕ್ಕಿಬಿದ್ದರು. ಪೊಲೀಸರು ಹಾಗೂ ಡಕಾಯಿತರ ಮೇಲೆ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ.
ಮುಂಡಗೋಡು ಸಿಪಿಐ ರಂಗನಥ ನೀಲಮನ್ನವರ, ಪಿಎಸ್ಐ ಪರಶುರಾಮ ಹಾಗೂ ಯಲ್ಲಾಪುರ ಪೊಲೀಸ್ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಕಾಲಿಗೆ ಗುಂಡು ತಾಗಿಸಿಕೊಂಡ ಆರೋಪಿತರಲ್ಲಿ ಇಬ್ಬರು ಕೊಲೆ ಆರೋಪಿಗಳಾಗಿದ್ದು, ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದರು.
ಐವರಲ್ಲಿ ಇಬ್ಬರು ಡಕಾಯಿತರ ಕಾಲಿನಲ್ಲಿ ಗುಂಡುಗಳಿರುವುದರಿಂದ ಅವರನ್ನು ಕಾರವಾರದ ಕಿಮ್ಸ್’ಗೆ ದಾಖಲಿಸಲಾಗಿದೆ.