ಮುಂಡಗೋಡ: ಜೈಲಿನಿಂದ ಜಾಮೀನಿನ ಮೇಲೆ ಹೊರಬರುವ ಕೈದಿಗಳಿಗೆ ಅದ್ಧೂರಿ ಸ್ವಾಗತ-ಮೆರವಣಿಗೆ ಮೂಲಕ ಬರ ಮಾಡಿಕೊಳ್ಳುತ್ತಿದ್ದ ಜಮೀರ ಅಹ್ಮದ್ ದುರ್ಗಾವಾಲೆ ನಂತರ ತನ್ನ ಅಕ್ರಮ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದ. ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಬ್ಲಾಕ್ ಟಿಕೆಟ್ ಮಾರಾಟ, ಮಟ್ಕಾ, ಹಪ್ತಾ ವಸೂಲಿ ಸೇರಿ ಹಲವು ಬಗೆಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಜಮೀರ್ 150ಕ್ಕೂ ಅಧಿಕ ಕ್ರಿಮಿನಲ್ ಹಿನ್ನಲೆ ಹೊಂದಿರುವವರಿಗೆ ಆಶ್ರಯ ನೀಡಿದ್ದ. ಈಚೆಗೆ ಆತ ತನ್ನನ್ನು ದೊಡ್ಡ ಉದ್ಯಮಿ ಎಂದು ಬಿಂಬಿಸಿಕೊoಡಿದ್ದು, ಜಮೀರ್ ಬಳಿಯಿಂದ ಕಾಸು ನೋಡಿದ್ದ ಖಾಜಾ ಎಂಬಾತ ಜಮೀರ್’ನನ್ನು ಅಪಹರಿಸಿ ಕಾಸು ಕೀಳುವ ಪ್ರಯತ್ನ ನಡೆಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಗುರುವಾರ ರಾತ್ರಿ ಜಮೀರ ಅಹ್ಮದ್ ದುರ್ಗಾವಾಲೆ ಅಪಹರಣ ನಡೆದಿತ್ತು. ಅಪಹರಣ ನಡೆಸಿದವರು 30 ಲಕ್ಷ ರೂಪಾಯಿ ಬೇಡಿದ್ದು, ಜಮೀರ್ ಕುಟುಂಬದವರು 18 ಲಕ್ಷ ರೂ ಕೊಟ್ಟಿದ್ದರು. ಮರುದಿನ ಹಣ ಪಡೆದಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಹಣ ಪಡೆಯಲು ಸೂಚಿಸಿದ ತಂಡದವರು ಸಿಕ್ಕಿರಲಿಲ್ಲ. ಪಡೆದ ಹಣವನ್ನು ಪಾಲು ಮಾಡಿಕೊಳ್ಳುವುದಕ್ಕಾಗಿ ಅಪಹರಣದ ರೂವಾರಿ ಖಾಜಾ ಹಾಗೂ ಸಹಚರರು ತೆರಳುತ್ತಿದ್ದಾಗ ಆ ಮಾಹಿತಿ ಆಧರಿಸಿ ಶುಕ್ರವಾರ ನಸುಕಿನಲ್ಲಿ ಪೊಲೀಸರು ಬೆನ್ನಟ್ಟಿದ್ದರು. ಪೊಲೀಸರು ಬರುವುದನ್ನು ನೋಡಿದ ದುಷ್ಕರ್ಮಿಗಳು ಕಾರಿನ ವೇಗ ಹೆಚ್ಚಿಸಿದ್ದು, ಯಲ್ಲಾಪುರದ ಡೌಗಿನಾಳದ ಬಳಿ ಕಾರು ಮರಕ್ಕೆ ಗುದ್ದಿದೆ. ಈ ವೇಳೆ ಕಾರಿನಲ್ಲಿದ್ದವರು ಪೊಲೀಸರ ಮೇಲೆ ಮಾರಕಾಸ್ತಗಳಿಂದ ಹಲ್ಲೆ ನಡೆಸಿದ್ದು, ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಈ ಅವಧಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಅದಾಗಿಯೂ ಪೊಲೀಸರು ಕಾರಿನಲ್ಲಿದ್ದ ಎಲ್ಲರನ್ನು ವಶಕ್ಕೆ ಪಡೆದರು. ಅವರ ವಿಚಾರಣೆ ನಡೆಸಿದಾಗ ಮತ್ತೆ ಇಬ್ಬರು ಪ್ರಮುಖ ಆರೋಪಿಗಳಿರುವುದು ಗೊತ್ತಾಗಿದೆ.
ಈ ಸಂಘರ್ಷದಲ್ಲಿ ಮುಂಡಗೋಡು ಸಿಪಿಐ ರಂಗನಥ ನೀಲಮನ್ನವರ, ಪಿಎಸ್‌ಐ ಪರಶುರಾಮ ಹಾಗೂ ಯಲ್ಲಾಪುರ ಪೊಲೀಸ್ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಎದುರಾಳಿಗಳ ಪೈಕಿ ರಹೀಮ್ ಜಾಫರ ಸಾಬ ಹಾಗೂ ಅಜಯ ಫಕೀರಪ್ಪ ಕಾಲಿಗೆ ಗುಂಡಿನ ಏಟು ಬಿದ್ದಿದೆ. ಆ ಕಾರಿನ ಚಾಲಕ ದಾದಾಫೀರ್ ಅಲ್ಲಾಭಕ್ಷ, ಸಾಗರ ಕಲಾಲ ಹಾಗೂ ಹಾಸೀಂ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನೂ `ಅಪಹರಣಕ್ಕೊಳಗಾದ ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ. ಆತನ ವಿರುದ್ಧ ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್ ಸೇರಿ ಅನೇಕ ಪ್ರಕರಣಗಳಿವೆ. ಮುಂಡಗೋಡಿನಲ್ಲಿ ಒಂದಷ್ಟು ಹುಡುಗರನ್ನು ಇರಿಸಿಕೊಂಡು ಲೇವಾದೇವಿ ವ್ಯವಹಾರ ಮಾಡುತ್ತಿದ್ದ. ಈತನಿಗೆ ಜೈಲಿನಿಂದ ಬಿಡುಗಡೆಯಾಗುವ ಕ್ರಿಮಿನಲ್ ಗಳನ್ನು ಸಂಪರ್ಕಿಸಿ, ಅವರೊಂದಿಗೆ ಸ್ನೇಹ ಬೆಳೆಸುವ, ತನ್ನ ವ್ಯವಹಾರಕ್ಕೆ ಅವರನ್ನು ಸೇರಿಸಿಕೊಳ್ಳುವ ಶೋಕೀ ಇತ್ತು. ಅದರಂತೆಯೇ ಧಾರವಾಡದಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ರಹೀಮ್ ಹಾಗೂ ಅಜಯರನ್ನೂ ಪರಿಚಯ ಮಾಡಿಕೊಂಡಿದ್ದ. ಅವರಿಬ್ಬರೂ ಕಳೆದ ಡಿಸೆಂಬರ್ 3ರಂದು ಜಮೀರ್ ಮನೆಗೆ ಬಂದಾಗ, ಅವನ ಶ್ರೀಮಂತಿಕೆ ನೋಡಿದ್ದರು. ಮುಂಡಗೋಡಿನ ಖಾಜಾ ಎಂಬಾತ ಜಮೀರ್ ನನ್ನು ಅಪಹರಣ ಮಾಡಿ ಹಣ ಗಳಿಸುವ ಉಪಾಯವನ್ನು ನೀಡಿದ್ದಾನೆ. ಅದರಂತೆ ಅಪಹರಣ ಕಾರ್ಯಾಚರಣೆಗಿಳಿದಿದ್ದರು’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಪ್ರಕರಣದ ವಿವರ ಬಿಚ್ಚಿಟ್ಟರು.
`ಈ ಪ್ರಕರಣ ಬೇಧಿಸಲು ಇಲಾಖೆಯಿಂದ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಅಪಹರಣಕ್ಕೊಳಗಾದವನ ಪ್ರಾಣಕ್ಕೆ ಅಪಾಯವಾಗದಂತೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಈಗಾಗಲೇ ಹತ್ತು ಜನರನ್ನು ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂಬ ಭರವಸೆ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿಗಳಾದ ಗಣೇಶ ಕೆ ಎಲ್, ಶಿವಾನಂದ, ಸಿಪಿಐ ರಮೇಶ ಹಾನಾಪುರ, ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಇತರರಿದ್ದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..