ಯಲ್ಲಾಪುರ: ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸರನ್ನು `ಕನ್ನಡಪ್ರಭ.ಕಾಂ’ ವೆಬ್‌ಸೈಟ್ `ಬಂಧಿತ ಆರೋಪಿಗಳು’ ಎಂದು ಬಿಂಬಿಸಿದೆ!
ಯಲ್ಲಾಪುರದ ಡೌಗಿನಾಳದಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೊಲೀಸರ ಮೇಲೆ ಕಲ್ಲು, ಖಾರದಪುಡಿ, ಲಾಂಗುಗಳ ದಾಳಿ ನಡೆದಿತ್ತು. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದರು. ಈ ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ ಇಬ್ಬರು ದುಷ್ಕರ್ಮಿಗಳು ಗಾಯಗೊಂಡಿದ್ದರು. ಗಾಯಗೊಂಡ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಈ ಕುರಿತು `ಅಪಹರಣಕಾರರ ಬಂಧನ ವೇಳೆ ಪೊಲೀಸರ ಮೇಲೆ ದಾಳಿ: ದುಷ್ಕರ್ಮಿಗಳಿಗೆ ಗುಂಡೇಟು’ ಎಂಬ ಶೀರ್ಷಿಕೆಯ ಅಡಿ ಜನವರಿ 11ರ ಸಂಜೆ 4.47ಕ್ಕೆ ಕನ್ನಡಪ್ರಭ.ಕಾಂ ಫೋಟೋ ಸುದ್ದಿ ಪ್ರಕಟಿಸಿದ್ದು, ಇದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪೊಲೀಸರನ್ನು `ಆರೋಪಿಗಳು’ ಎಂದು ಬಿಂಬಿಸಿದೆ.





