ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕರಿಕಲ್ ನಾರಾಯಣ ಹೆಗಡೆ ಅಧ್ಯಕ್ಷರಾಗಿದ್ದಾರೆ. ಗುರುವಾರ ಕೃಷಿ ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೃಷಿಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದು, ಸಮಸ್ಯೆಗೆ ತಕ್ಕ ಪರಿಹಾರ ಒದಗಿಸುವುದು ಕೃಷಿಕ ಸಮಾಜದ ಪ್ರಮುಖ ಜವಾಬ್ದಾರಿ. ನಾರಾಯಣ ಹೆಗಡೆ ಅವರು ತಮ್ಮ ತೋಟಗಾರಿಕಾ ಕ್ಷೇತ್ರದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಹಿನ್ನಲೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇಶ-ವಿದೇಶಗಳಿಗೆ ತೆರಳಿ ಕೃಷಿ ಅಧ್ಯಯನ ನಡೆಸಿರುವ ಅವರು ಅಂಕೋಲಾ ಹಾಗೂ ಯಲ್ಲಾಪುರದಲ್ಲಿ `ಶ್ರೀ ಎಂಟಪ್ರೆಸೆಸ್’ ಎಂಬ ಕೃಷಿ ಉಪಕರಣ ಮಾರಾಟ ಮಳಿಗೆಯನ್ನು ಹೊಂದಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಗೆ ಕಾರವಾರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ನಾರಾಯಣ ಹೆಗಡೆ ಅಧ್ಯಕ್ಷರಾಗಿರಲಿದ್ದಾರೆ. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿ ನಾಗರಾಜ ಮಾದೇವಪ್ಪ ಬೆಣ್ಣೆ ಮುಂಡಗೋಡ, ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲ ರಾಮ ನಾಯ್ಕ ಸಿದ್ದಾಪುರ, ಖಜಾಂಚಿಯಾಗಿ ಮಲ್ಲಾರಿ ವಿರೂಪಾಕ್ಷ ಘಾಡಿ ಹಳಿಯಾಳ ಹಾಗೂ ರಾಜ್ಯ ಪ್ರತಿನಿಧಿ ಸ್ಥಾನಕ್ಕೆ ರಾಮಚಂದ್ರ ದೇವರು ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರತಿ ತಾಲೂಕಾ ಮಟ್ಟದಲ್ಲಿಯೂ ಕೃಷಿಕ ಸಮಾಜ ಪದಾಧಿಕಾರಿಗಳನ್ನು ಹೊಂದಿದೆ.



