ಶಿರಸಿ: ವೃದ್ಧೆಯೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಕಾಸನ್ನು ನೋಡಿದ ಕಂಡೆಕ್ಟರ್ ಆ ವೃದ್ಧೆಯನ್ನು ಹುಡುಕಿ ಅವರ ಹಣ ಮರಳಿಸಿದ್ದಾರೆ.
ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ (70) ಎಂಬಾತರು ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿ ಮಾರಾಟ ಮಾಡಿದ್ದರು. ಇದರಿಂದ ಅವರಿಗೆ 9500ರೂ ಹಣ ಸಿಕ್ಕಿತ್ತು. ಖಾಲಿ ಚೀಲದಲ್ಲಿ ಆ ಹಣವನ್ನಿರಿಸಿಕೊಂಡು ದಿನಬಳಕೆ ಸಾಮಗ್ರಿಗಳ ಜೊತೆ ಅವರು ಶಿರಸಿ-ಹಾವೇರಿ ಮಾರ್ಗದ ಬಸ್ಸು ಏರಿದ್ದರು.
ಬಸ್ಸಿನಿಂದ ಇಳಿಯುವಾಗ ಖಾಲಿ ಅವಲಕ್ಕಿ ಚೀಲವನ್ನು ಅಲ್ಲಿಯೇ ಬಿಟ್ಟಿದ್ದರು. ಆ ಚೀಲದಲ್ಲಿ ಹಣವಿರುವದನ್ನು ಸಹ ಮರೆತಿದ್ದರು. ಬಸ್ಸು ನಿಲ್ದಾಣ ತಲುಪಿದ ನಂತರ ಖಾಲಿ ಚೀಲ ಗಮನಿಸಿದ ಬಸ್ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್ ಅದರಲ್ಲಿದ್ದ ಹಣವನ್ನು ಗಮನಿಸಿದರು.
ಜೊತೆಗೆ ಆ ಚೀಲದಲ್ಲಿ ಅಜ್ಜಿಯ ರೇಶನ್ ಕಾರ್ಡ ಇದ್ದಿದ್ದರಿಂದ ಅಜ್ಜಿಯ ವಿಳಾಸವನ್ನು ಪತ್ತೆ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಗೆ ಅವರು ಆ ಹಣ ತಲುಪಿಸಿದರು. ಜೊತೆಗೆ ಅವರ ಸಾಮಗ್ರಿಗಳನ್ನು ಮುಟ್ಟಿಸಿದರು.