ಯಲ್ಲಾಪುರ: ಕಳೆದ ಜಾತ್ರೆಯಲ್ಲಿ ಪಟ್ಟಣ ಪಂಚಾಯತಗೆ ದೊರೆತ ಆದಾಯ ಹಾಗೂ ವೆಚ್ಚಗಳ ಬಗ್ಗೆ ಈವರೆಗೂ ಸರಿಯಾದ ಮಾಹಿತಿ ಸಿಗದ ಬಗ್ಗೆ ಪ ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಂಗಡಿ ಮುಂಗಟ್ಟು ಹರಾಜು ಪ್ರಕ್ರಿಯೆ ಹಾಗೂ ಹಣ ವಸೂಲಿ ವಿಷಯದಲ್ಲಿ ಅವ್ಯವಹಾರ ನಡೆದ ಬಗ್ಗೆ ಸಂಶಯವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ `ಜಾತ್ರೆ ವಿಷಯದ ಲೆಕ್ಕಾಚಾರ ಒದಗಿಸುವಂತೆ ಸಾಕಷ್ಟು ಬಾರಿ ಸೂಚಿಸಿದರೂ ಯಾರೂ ಉತ್ತರಿಸಿಲ್ಲ. ಸದಸ್ಯರ ಪ್ರಶ್ನೆಗಳಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಜಾತ್ರೆಯ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಪ ಪಂ ಸದಸ್ಯರು ಪಟ್ಟುಹಿಡಿದರು.
`ಸರಿಯಾದ ಮಾಹಿತಿ ಸಿಗದ ಹಿನ್ನಲೆ ಕಳೆದ ಬಾರಿಯ ಸಭೆಯನ್ನು ಬಹಿಷ್ಕರಿಸಲಾಗಿತ್ತು. ಈಗಲೂ ಹಾಗೇ ಆದರೆ ಮತ್ತೆ ಬಹಿಷ್ಕಾರ ಅನಿವಾರ್ಯ’ ಎಂದು ಎಚ್ಚರಿಸಿದರು. ಕೊನೆಗೆ ಜಾತ್ರೆ ವಿಷಯವಾಗಿನ ಕಡತ ಪರಿಶೀಲನೆಗಾಗಿಯೇ ಜ 23ರಂದು ವಿಶೇಷ ಸಭೆ ನಡೆಸಲು ನಿರ್ಧರಿಸಲಾಯಿತು.
ಇನ್ನೂ ವಸತಿ ನಿವೇಶನಗಳನ್ನು ಪಟ್ಟಣ ಪಂಚಾಯತ ಹಸ್ತಾಂತರ ಪಡೆಯುವ ಮುನ್ನ ಅಲ್ಲಿ ಎಲ್ಲಾ ಬಗೆಯ ಸೌಕರ್ಯ ಪರಿಶೀಲನೆ ನಡೆಸಬೇಕು ಎಂದು ಸದಸ್ಯರು ಸೂಚಿಸಿದರು. ಈಗಾಗಲೇ ಹಸ್ತಾಂತರವಾದ ವಸತಿ ನಿವೇಶನಗಳ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.