ಮೂಲಭೂತ ಸೌಕರ್ಯ ಕಲ್ಪಿಸುವಂತೆ ಗುಡ್ಡಳ್ಳಿ ಜನ ನೀಡಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದಿಢೀರ್ ಆಗಿ ಗುಡ್ಡ ಏರಿ ಆ ಹಳ್ಳಿಗೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಆಗಮನದಿಂದ ಸಂತಸಗೊ0ಡ ಊರಿನ ಜನ ಅದ್ಧೂರಿಯಾಗಿ ಅವರನ್ನು ಬರಮಾಡಿಕೊಂಡಿದ್ದು, ಶಾಲು ಹೊದೆಸಿ ಗೌರವಿಸಿದರು.
ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡುವ ಗುಡ್ಡಳ್ಳಿಗೆ ಈವರೆಗೂ ಮೂಲಭೂತ ಸೌಕರ್ಯವಿಲ್ಲ. ಅಲ್ಲಿನ ಜನ ಸಮಯಕ್ಕೆ ಸರಿಯಾಗಿ ನಗರಸಭೆಗೆ ತೆರಿಗೆ ಪಾವತಿಸುತ್ತಿದ್ದರೂ ಅವರಿಗೆ ನಗರದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಊರಿಗೆ ತೆರಳಲು ರಸ್ತೆ ಸಂಪರ್ಕ ಸಹ ಸರಿಯಾಗಿಲ್ಲ. ಈ ಹಿನ್ನಲೆ ಕಳೆದ ಹಲವು ವರ್ಷಗಳಿಂದ ಗುಡ್ಡಳ್ಳಿ ಭಾಗದವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಗೆ ಹೊಸದಾಗಿ ಯಾವ ಅಧಿಕಾರಿ ಬಂದರೂ ಗುಡ್ಡಳ್ಳಿ ಭಾಗದವರಿಗೆ ಹೊಸ ಆಶಾಭಾವನೆ ಮೂಡುತ್ತದೆ. ಹೀಗಾಗಿ `ನಮ್ಮೂರಿನ ಸಮಸ್ಯೆ ಬಗೆಹರಿಸಿ’ ಎಂದು ಆ ಭಾಗದವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಾರೆ. ಊರಿನ ಸಮಸ್ಯೆಗಳ ಬಗ್ಗೆ ವಿವರಿಸುತ್ತಾರೆ. ಅದರಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಗುಡ್ಡಳ್ಳಿಯ ಜನ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದರು. ಊರಿನವರ ಸಮಸ್ಯೆ ಆಲಿಸಿದ ಲಕ್ಷ್ಮೀಪ್ರಿಯಾ ಶುಕ್ರವಾರ ದಿಢೀರ್ ಆಗಿ ಆ ಊರಿಗೆ ತೆರಳಿದರು!
ಕಾರವಾರದಿಂದ 3 ಕಿಮೀ ದೂರದಲ್ಲಿದ್ದರೂ ಇಲ್ಲಿ ನಕುಲ್ ಅವರನ್ನು ಹೊರತುಪಡಸಿ ಯಾವ ಜಿಲ್ಲಾಧಿಕಾರಿಗಳು ಭೇಟಿ ನೀಡಿರಲಿಲ್ಲ. ಪ್ರಸ್ತುತ ಲಕ್ಷ್ಮೀಪ್ರಿಯಾ ಅವರು ಗುಡ್ಡಳ್ಳಿಗೆ ಭೇಟಿ ನೀಡಿದ ಎರಡನೇ ಜಿಲ್ಲಾಧಿಕಾರಿ ಹಾಗೂ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಹಿನ್ನಲೆ ಆ ಭಾಗದ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಶಾಲು ಹೊದೆಸಿ ಗೌರವಿಸಿದರು. ಅದಾದ ನಂತರ ಊರಿನ ಮುಖ್ಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ, ಪರಿಹಾರ ಒದಗಿಸುವಂತೆ ಕೇಳಿಕೊಂಡರು.