ಅಸ್ತಿತ್ವವಿಲ್ಲದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ಪದೇ ಪದೇ ನೋಟಿಸ್ ಬರುತ್ತಿದ್ದು, ಇದನ್ನು ವಿರೋಧಿಸಿ ಜನವರಿ 23ರಂದು ಸಾವಿರಾರು ಜನರಿಂದ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ.
ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಲಯದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. `ಶಿರಸಿ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿಯವರು ಮೂರು ತಲೆಮಾರಿನ ಪೂರ್ವದ ದಾಖಲೆ ಕೇಳುತ್ತಿದ್ದಾರೆ. ಅರಣ್ಯ ಜಮೀನಿನ ಕಬ್ಜ ಹೊಂದಿರುವ ಬಗ್ಗೆ ದಾಖಲೆಗಳಿಗೆ ಹಾಜರು ಮಾಡಲು ಕಾನೂನು ವ್ಯತಿರಿಕ್ತವಾಗಿ ನೋಟಿಸ್ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಲಾಗುತ್ತದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಿಸಿದರು.
ಈ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಉಸ್ತುವಾರಿ ಕಾರ್ಲಲುಯಿಸ್ ಫರ್ನಾಂಡಿಸ್, ಪ್ರಮುಖರಾದ ಕಿರಣ ಮರಾಠಿ ದೇವನಳ್ಳಿ, ನೆಹರು ನಾಯ್ಕ ಬಿಳೂರು, ರಮೇಶ ಮರಾಠಿ ಚಂದ್ರಶೇಖರ ಶಾನಭಾಗ ಬಂಡಲ, ಎಮ್ ಆರ್ ನಾಯ್ಕ, ಕಂಡ್ರಾಜಿ, ಬಾಬು ಮರಾಠಿ, ಪರಮೇಶ್ವರ ವಾನಳ್ಳಿ, ಮಲ್ಲೇಶಿ ಸಂತೊಳ್ಳಿ, ಶಂಕರ ಗೌಡ ಜಾನ್ಮನೆ, ಚಂದ್ರು ನಾಯ್ಕ ಕಂಡ್ರಾಜಿ, ಕುಸುಮಾ ಬೇಡರ, ಕಲ್ಪನಾ ಫಾವಸ್ಕರ್, ಯಶೋಧಾ ನೌಟುರು, ಟಿಪ್ಪು ನಾಯ್ಕ ಗೋಣುರು, ಶಿವು ಗೌಡ ಕೊಟ್ಟೆಕೊಪ್ಪ, ಬೇಳ್ಳಾ ಗೌಡ ಬಂಕನಾಳ, ಶಂಭು ಮಡಿವಾಳ ಮಳಲಗಾಂವ್ ಇತರರು ಇದ್ದರು.