ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ನಿಂದನಾರ್ಹ ವರದಿ ಪ್ರಕಟಿಸಿದ ಕಾರಣ ಕನ್ನಡವಾಣಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
`ಕನ್ನಡವಾಣಿಯ ನವೀನ ಸಾಗರ ಹಾಗೂ ನಾಗವೇಣಿ ಶೆಟ್ಟಿ ಎಂಬಾತರು ಒಳಸಂಚು ಮಾಡಿ ಶಾಸಕರ ಹೆಸರು ಕೆಡಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು ಮಧುಸೂಧನ ಹೆಗಡೆ ಎಂಬಾತರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಶಾಸಕರ ಬಳಿ ಹಣ ಕೇಳಲು ಬಂದ ಮಹಿಳೆಯೊಬ್ಬರು ಹಣ ಎಗರಿಸಿದ ಆರೋಪ ಎದುರಿಸುತ್ತಿದ್ದರು. ಈ ವಿಷಯವಾಗಿ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಆ ವೇಳೆಯಲ್ಲಿ ತೇಜೋವಧೆ ನಡೆಸಿದ ಆರೋಪದ ಅಡಿ ಮೂವರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು.
ಅದಾದ ನಂತರ ಮಹಿಳೆಯೊಬ್ಬರು ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಶಾಸಕ ದಿನಕರ ಶೆಟ್ಟಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿರುವುದು ವೈರಲ್ ಆಗಿತ್ತು. ಕನ್ನಡವಾಣಿ ವೆಬ್ ಪೋರ್ಟಲ್’ನಲ್ಲಿ ಸಹ ಈ ವರದಿ ಪ್ರಸಾರವಾಗಿದ್ದು, `ಕನ್ನಡವಾಣಿಯ ನವೀನ ಸಾಗರ್ ಹಾಗೂ ನಾಗವೇಣಿ ಶೆಟ್ಟಿ ಒಳಸಂಚು ರೂಪಿಸಿ ಈ ವದಂತಿ ಹಬ್ಬಿಸಿದ್ದಾರೆ’ ಎಂಬುದು ದೂರುದಾರರ ಆರೋಪ.
`ಸುಳ್ಳು ಸುದ್ದಿಯನ್ನು ಸತ್ಯ ಎಂದು ಬಿಂಬಿಸಿ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸಲಾಗುತ್ತಿದೆ. ಇದರಿಂದ ಕಾರ್ಯಕರ್ತರ ಮನಸ್ಸಿಗೂ ನೋವಾಗಿದೆ’ ಎಂದು ದೂರಿ ಮಧುಸೂಧನ ಹೆಗಡೆ ಅವರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.