ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದ ಖುಷಿಗೆ ಪಟಾಕಿ ಹೊಡೆದ ಬಿಜೆಪಿಗರು ನಂತರ ಪಟಾಕಿಯಿಂದಾದ ಮಾಲಿನ್ಯವನ್ನು ಗುಡಿಸಿ ಸ್ವಚ್ಛಗೊಳಿಸಿದರು.!
ಯಲ್ಲಾಪುರ ತಾಲೂಕಿನ ಮದನೂರು ಗ್ರಾಮ ಪಂಚಾಯತಗೆ ಕೆಲ ದಿನಗಳ ಹಿಂದೆ ಅವಿಶ್ವಾಸ ಮಂಡನೆ ನಡೆದಿತ್ತು. ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರು. ಅದರ ಪ್ರಕಾರ ಮದನೂರು ಗ್ರಾ ಪಂ ಅಧ್ಯಕ್ಷರಾಗಿ ವಿಠ್ಠು ಶಳಕೆ ಹಾಗೂ ಉಪಾಧ್ಯಕ್ಷರಾಗಿ ಜನ್ನಬಾಯಿ ಬರಾಗಡೆ ಆಯ್ಕೆಯಾದರು. ಈ ಖುಷಿಯನ್ನು ಹಂಚಿಕೊಳ್ಳುವುದಕ್ಕಾಗಿ ಪೊಲೀಸ್ ಠಾಣೆ ಎದುರು ಬಿಜೆಪಿಗರು ಶುಕ್ರವಾರ ಮಧ್ಯಾಹ್ನ ಪಟಾಕಿ ಹೊಡೆದು ಸಂಭ್ರಮಿಸಿದರು. ಅದಾದ ನಂತರ ಆ ಜಾಗವನ್ನು ಗುಡಿಸಿ ತ್ಯಾಜ್ಯ ಆರಿಸಿದರು.
`ಮದನೂರು ಗ್ರಾಮ ಪಂಚಾಯತ ಹಿಂದುತ್ವದ ನೆಲ. ಸಾಕಷ್ಟು ಆಮೀಷ, ಒತ್ತಡ, ಬೆದರಿಕೆ ಒಡ್ಡಿದರೂ ಇಲ್ಲಿನ ಕಾರ್ಯಕರ್ತರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಲ್ಲ’ ಎಂದು ಬಿಜೆಪಿ ರಾಜ್ಯವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು. `ಬಿಜೆಪಿ ಪಕ್ಷದಿಂದ ಆಯ್ಕೆಯಾದವರು ಇದೀಗ ಬಿಜೆಪಿಗರನ್ನು ಕೆಡೆಗಣಿಸಿದ್ದರಿಂದ ಮೂರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ನೋವು ಅನುಭವಿಸಿದ್ದರು. ಮದನೂರು ಗ್ರಾಮ ಪಂಚಾಯತವನ್ನು ತಕ್ಕೆಗೆ ಪಡೆಯುವ ಮೂಲಕ ಪಕ್ಷದ್ರೋಹ ಎಸಗಿದವರಿಗೆ ಕಾರ್ಯಕರ್ತರು ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.
`ವಿಠ್ಠು ಶಳಕೆ ಅವರ ಮೇಲೆ ಈ ಹಿಂದೆ ಹಲ್ಲೆ ನಡೆದಿತ್ತು. ಅದನ್ನು ಮೆಟ್ಟಿನಿಂತು ಅವರು ಇದೀಗ ಗ್ರಾ ಪಂ ಅಧ್ಯಕ್ಷರಾಗಿದ್ದಾರೆ. ಗ್ರಾಮ ಪಂಚಾಯತದ ೧೩ ಸದಸ್ಯರಲ್ಲಿ ೧೦ ಸದಸ್ಯರು ಬಿಜೆಪಿಗರಾಗಿದ್ದು, ಎಲ್ಲಾ ಸವಾಲುಗಳನ್ನು ಸ್ವೀಕರಿಸಲು ಸಿದ್ಧ’ ಎಂದು ವಿಠ್ಠಲ ಪಾಂಡ್ರಮೀಸೆ ಹೇಳಿದರು. `ಜಾತಿ ಜಾತಿ ನಡುವೆ ದ್ವೇಷ ತರುವ ಪ್ರಯತ್ನ ನಡೆದರೂ ಅದನ್ನು ಮೀರಿ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ್ದಾರೆ’ ಎಂದವರು ವಿವರಿಸಿದರು. ಪಟಾಕಿ ಹೊಡೆದು ಸಂಭ್ರಮಿಸಿದ ನಂತರ ಹರಿಪ್ರಕಾಶ ಕೋಣೆಮನೆ, ಉಮೇಶ ಭಾಗ್ವತ, ರವಿ ದೇವಾಡಿಗ ಸೇರಿ ಆ ಪ್ರದೇಶ ಗುಡಿಸಿದರು.