ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ-ಹಳಿಯಾಳ ಭಾಗದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಓಡಾಟ ಜೋರಾಗಿದೆ. ರಾತ್ರಿ ವೇಳೆ ಹೊಲ-ತೋಟಗಳಿಗೆ ನುಗ್ಗುತ್ತಿರುವ ಆನೆಗಳು ಹಗಲಿನಲ್ಲಿ ರಸ್ತೆ ಅಂಚಿನಲ್ಲಿಯೇ ಕಾಣಿಸುತ್ತಿವೆ. ದಾಂಡೇಲಿ ಪ್ರವಾಸಕ್ಕೆ ಬರುವ ಜನ ಜೀವದ ಆಸೆ ಬಿಟ್ಟು ಆನೆಗಳ ಜೊತೆ ಸೆಲ್ಪಿ ತೆಗಿಸಿಕೊಳ್ಳುತ್ತಿದ್ದಾರೆ!
ಹಳಿಯಾಳ ದಾಂಡೇಲಿ ಮಾರ್ಗವಾಗಿ ಶುಕ್ರವಾರ ಸಹ ಆನೆಗಳ ಗುಂಪು ಕಾಣಿಸಿಕೊಂಡಿತು. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಆನೆ ಅಡ್ಡಗಟ್ಟಿತು. ಈ ನಡುವೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರು ಆನೆಗಳ ಸಮೀಪ ತೆರಳಿ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಇನ್ನು ಕೆಲವರು ಪ್ರವೇಶವಿಲ್ಲದ ಅರಣ್ಯದೊಳಗೆ ಪ್ರವೇಶಿಸಿ ಆನೆ ಸಂಚಾರದ ವಿಡಿಯೋ ಮಾಡಿದರು.
ಪ್ರತಿ ಸಲ ಆನೆ ಬಂದಾಗಲೂ ಊರಿನವರು ಅರಣ್ಯಾಧಿಕಾರಿಗಳಿಗೆ ದೂರು ನೀಡುವುದು ವಾಡಿಕೆ. ಅದರಂತೆ ಹಳಿಯಾಳ ಭಾಗದಲ್ಲಿ ಮೊನ್ನೆ ಒಂಟಿ ಸಲಗ ಕಾಣಿಸಿಕೊಂಡಾಗ ಅಲ್ಲಿನವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದಾಗ ಅವರಿಗೆ ಆನೆ ಕಾಣಿಸಿಲ್ಲ. ಇದೀಗ ದಾಂಡೇಲಿ-ಹಳಿಯಾಳ ರಸ್ತೆಯಲ್ಲಿ ಆನೆಗಳ ದಂಡೇ ಕಾಣಿಸಿದ್ದು, ಆ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಆನೆ ಓಡಿಸುವ ಪ್ರಯತ್ನವೂ ನಡೆದಿಲ್ಲ.