ಸ್ನೇಹಿತರ ಬಳಿ 10 ಸಾವಿರ ರೂ ಸಾಲ ಮಾಡಿ ಶಬರಿಮಲೆಗೆ ಹೋಗಿದ್ದ ಶ್ರೀನಿವಾಸ ರೆಡ್ಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. `ಹಣ ಮರಳಿಸಿದೇ ಇದ್ದಲ್ಲಿ ಕೊಲೆ ಮಾಡುವೆ’ ಎಂದು ಬೆದರಿಸಿದ ಮೂವರು ಸ್ನೇಹಿತರು ಸೇರಿ ಶ್ರೀನಿವಾಸ ರೆಡ್ಡಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಅವರು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಜಯನಗರ ಮೂಲದ ಶ್ರೀನಿವಾಸ ರೆಡ್ಡಿ ಶಿರಸಿಯ ಟಿಎಸ್‌ಎಸ್ ರಸ್ತೆಯಲ್ಲಿ ರಿಕ್ಷಾ ಓಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಶಬರಿಮಲೆಗೆ ಹೋಗುವುದಕ್ಕಾಗಿ ಅವರು ತಮ್ಮ ಸ್ನೇಹಿತನೂ ಆದ ಚಿಪಗಿಯ ರಿಕ್ಷಾ ಚಾಲಕ ಅಣ್ಣಪ್ಪ ಬಾಡದ ಅವರ ಬಳಿ 10 ಸಾವಿರ ರೂ ಸಾಲ ಪಡೆದಿದ್ದರು. ಆ ಪೈಕಿ 5 ಸಾವಿರ ರೂ ಪಾವತಿ ಮಾಡಿದ್ದು, ಉಳಿದ ಹಣ ಪಾವತಿಗೆ ಸಮಯ ಕೇಳಿದ್ದರು.
ಜನವರಿ 16ರಂದು ಶ್ರೀನಿವಾಸ ರೆಡ್ಡಿ ಅವರ ಮನೆಗೆ ನುಗ್ಗಿದ ಅಣ್ಣಪ್ಪ ಬಾಡದ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಅಣ್ಣಪ್ಪ ಬಾಡದ ಅವರ ಜೊತೆಗೆ ಬಂದಿದ್ದ ರಿಕ್ಷಾ ಚಾಲಕ ಸಂತೋಷ ಶೆಟ್ಟಿ ಹಾಗೂ ಮಾರಿಗುಡಿಯ ಅಣ್ಣಪ್ಪ ರಾಯ್ಕರ್ ಸೇರಿ ಶ್ರೀನಿವಾಸ ರೆಡ್ಡಿ ಅವರನ್ನು ಇನ್ನೊಂದು ರಿಕ್ಷಾದ ಒಳಗೆ ತುಂಬಿದ್ದಾರೆ. ಅದಾದ ನಂತರ ಈ ಮೂವರು ಸೇರಿ ರೆಡ್ಡಿ ಅವರನ್ನು ಹಳೆ ವೈಶಾಲಿ ಬಾರಿನ ಬಳಿ ಕರೆದೊಯ್ದು ಥಳಿಸಿದ್ದಾರೆ.
ಈ ಕೂಡಲೇ ಹಣ ಪಾವತಿಸದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಅವರಿಂದ ಏಟು ತಿಂದ ಶ್ರೀನಿವಾಸ ರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಪೊಲೀಸ್ ದೂರು ನೀಡಿದ್ದಾರೆ.