ಕಾರವಾರ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮಗಳ ಪಟ್ಟಿಯಲ್ಲಿರುವ ಗುಡ್ಡಳ್ಳಿಗೆ ವಿವಿಧ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮುಂದಾಗಿದ್ದಾರೆ. ಶುಕ್ರವಾರ ಗುಡ್ಡಳ್ಳಿಗೆ ದಿಢೀರ್ ಭೇಟಿ ನೀಡಿದ ಅವರು ಜನರ ಸಮಸ್ಯೆ ಆಲಿಸಿದರು. ಅದಾದ ನಂತರ ಅಭಿವೃದ್ಧಿ ಚಟುವಟಿಕೆಯ ಬಗ್ಗೆ ಚರ್ಚಿಸಿ ವಾಗ್ದಾನ ಮಾಡಿದರು.
ಕಾರವಾರದಿಂದ 3.5 ಕಿಮೀ ದೂರವಿದ್ದರೂ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಸರಿಯಾಗಿರಲಿಲ್ಲ. ಎರಡು ವರ್ಷದ ಹಿಂದೆ 1.2ಕಿಮೀ ರಸ್ತೆ ನಿರ್ಮಿಸಿ ಕಡೀಕರಣ ಮಾಡುವುದಕ್ಕಾಗಿ ಅನುದಾನ ಮೀಸಲಿಟ್ಟಿದ್ದರೂ ಮಳೆ ಹಾಗೂ ಇನ್ನಿತರ ಕಾರಣದಿಂದ ಕೆಲಸ ಆಗಿರಲಿಲ್ಲ. ಗುತ್ತಿಗೆ ಪಡೆದಿರುವ ಸಿದ್ಧಾರ್ಥ ನಾಯ್ಕ ಅವರು ರಸ್ತೆ ಕಾಮಗಾರಿ ಶುರು ಮಾಡಿದಾಗ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿತ್ತು. ಆ ಅವಧಿಯಲ್ಲಿ ರಸ್ತೆಗೆ ಹಾಕಲು ತಂದಿರಿಸಿದ ಜಲ್ಲಿ ಕಲ್ಲುಗಳು ಸಹ ನೀರು ಪಾಲಾಗಿದ್ದವು. ಹೀಗಾಗಿ `ಗುಡ್ಡಳ್ಳಿ ಸಂಪರ್ಕಕ್ಕೆ ಡಾಂಬರೀಕರಣವೊ0ದೇ ದಾರಿ’ ಎಂದು ಗುತ್ತಿಗೆದಾರ ಸಿದ್ದಾರ್ಥ ನಾಯ್ಕ ಅವರು ಪತ್ರ ಬರೆದಿದ್ದರು.
ಇದಾದ ನಂತರ ಗ್ರಾಮದ ಜನರು ಸಹ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಊರಿನ ಸಮಸ್ಯೆ ಬಗ್ಗೆ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಸ್ವತಃ ಗುಡ್ಡಳ್ಳಿಗೆ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಲ್ಲಿನವರ ಸಮಸ್ಯೆ ಆಲಿಸಿದರು. ಊರಿನ ಜನ ಶಾಲೆ, ಅಂಗನವಾಡಿ ಹಾಗೂ ರಸ್ತೆ ಸಮಸ್ಯೆ ಬಗ್ಗೆ ಅವರಿಗೆ ಮನವರಿಕೆ ಮಾಡಿದರು. `ಅರ್ದಕ್ಕೆ ನಿಂತಿರುವ ರಸ್ತೆಯನ್ನು ಒಂದು ತಿಂಗಳಿನ ಒಳಗೆ ಪೂರ್ಣಗೊಳಿಸಿ’ ಎಂದು ಈ ವೇಳೆ ಲಕ್ಷ್ಮೀಪ್ರಿಯಾ ಅವರು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರೊಂದಿಗೆ ಜನರ ಬೇಡಿಕೆಯಂತೆ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಸಹ ಅವರು ಸಮ್ಮತಿ ಸೂಚಿಸಿದರು.
ಗುಡ್ಡಳ್ಳಿಯಲ್ಲಿರುವ ವಿಶ್ರಮ ಗೌಡ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಲ್ಲಿನ ವಿಗ್ರಹಗಳನ್ನು ವೀಕ್ಷಿಸಿದರು. ವಿಶ್ರಮ ಗೌಡ ಅವರು ತಯಾರಿಸಿದ ಬಂದೂಕು ಮಾದರಿಯನ್ನು ಕೈಯಲ್ಲಿ ಹಿಡಿದು ತಾಲೀಮು ನಡೆಸಿದರು. ಕಲಾವಿದನ ಶ್ರಮಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದು, ಇದರಿಂದ ಅಲ್ಲಿನ ಮಕ್ಕಳು ಖುಷಿ ಹಂಚಿಕೊ0ಡರು.