ಬ್ರಹ್ಮಾವರದಲ್ಲಿ ಸುಲಿಗೆ ಮಾಡಿ ಸೊಲ್ಲಾಪುರದ ಕಡೆ ಪರಾರಿಯಾಗಲು ಯತ್ನಿಸಿದ ಐವರು ದುಷ್ಕರ್ಮಿಗಳನ್ನು ಬಾಳೆಗುಳಿ ಬಳಿ ಅಂಕೋಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಇಲ್ಲಿನ ಪೊಲೀಸರು ಆ ಐದು ಜನರನ್ನು ಬೈಂದೂರು ಪೊಲೀಸರಿಗೆ ಒಪ್ಪಿಸಿದರು.
ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬ್ರಹ್ಮಾವರದಲ್ಲಿ ಸುಲಿಗೆ ನಡೆಸಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದರು. ಆರೋಪಿಗಳನ್ನು ಬೆನ್ನಟ್ಟಿ ಬಂದ ಬೈಂದೂರು ಪೊಲೀಸರಿಗೆ ಅವರು ಸಿಗದೇ ಪರಾರಿಯಾಗಿದ್ದರು. ಈ ಹಿನ್ನಲೆ ಬೈಂದೂರು ಪೊಲೀಸರು ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಂ’ಗೆ ಫೋನ್ ಮಾಡಿ ನೆರವು ಯಾಚಿಸಿದರು.
ತಕ್ಷಣ ಕಾರ್ಯಾಚರಣೆಗಿಳಿದ ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಮತ್ತು ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಗಡಿದಾಡಿ ಬರುವ ವಾಹನಗಳ ತಪಾಸಣೆಗೆ ನಿಂತರು. ಅನುಮಾನಾಸ್ಪದವಾಗಿ ಬಂದ ಮಾರುತಿ ಸುಜಕಿ ಕಾರ್ ತಡೆದು ವಿಚಾರಿಸಿದರು. ದುಷ್ಕರ್ಮಿಗಳ ಹೋಲಿಕೆ ಕಂಡು ಬಂದ ಹಿನ್ನಲೆ ಪೊಲೀಸ್ ಸಿಬ್ಬಂದಿ ಲಲಿತಾ ರಜಪೂತ್ ಹಾಗೂ ಪೊಲೀಸ್ ವಾಹನ ಚಾಲಕ ಸಂತೋಷ್ ಜೊತೆಗೂಡಿ ಆ ಕಾರಿನಲ್ಲಿದ್ದ ಎಲ್ಲರನ್ನು ವಶಕ್ಕೆ ಪಡೆದರು.
ಅದಾದ ನಂತರ ಬೈಂದೂರು ಪೊಲೀಸರು ಅಂಕೋಲಾಗೆ ಆಗಮಿಸಿದರು. ಇಲ್ಲಿನ ಪೊಲೀಸರು ವಶಕ್ಕೆ ಪಡೆದ ಐವರನ್ನು ಅವರು ತಮ್ಮ ಸುಪರ್ಧಿಗೆ ಪಡೆದರು. ಆರೋಪಿತರು ಬಳಸುತ್ತಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದರು.