125ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ಮಾಜಿ ಸಚಿವ ಉಮಾಶ್ರಿ ಅವರು ಇದೇ ಮೊದಲ ಬಾರಿಗೆ ಯಕ್ಷಗಾನದಲ್ಲಿ ಪಾತ್ರ ನಿಭಾಯಿಸಲಿದ್ದಾರೆ. ಶುಕ್ರವಾರ ಸಂಜೆ 9.30ಕ್ಕೆ ಹೊನ್ನಾವರದ ಪ್ರಭಾತನಗರದಲ್ಲಿರುವ ಸೆಂಟ್ ಅಂಥೋನಿ ಮೈದಾನದಲ್ಲಿ ಅವರು ಯಕ್ಷನೃತ್ಯ ಪ್ರದರ್ಶಿಸಲಿದ್ದಾರೆ.
ಬಾಲ್ಯದಲ್ಲಿಯೇ ರಂಗಭೂಮಿ ಪ್ರವೇಶಿಸಿದ ಉಮಾಶ್ರೀ ಅವರು ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿಯೂ ಹಾಸ್ಯ ಕಲಾವಿದರಾಗಿ ಅವರು ಪ್ರಸಿದ್ಧಿ ಪಡೆದಿದ್ದಾರೆ. ಇದರೊಂದಿಗೆ ಪೋಷಕ ಪಾತ್ರಗಳನ್ನು ಸಹ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ ಕಲಾರಂಗದಲ್ಲಿ ಅವರು ಈವರೆಗೂ ಯಕ್ಷಗಾನದ ವೇಷ ತೊಟ್ಟಿರಲಿಲ್ಲ. ಆದರೆ, ಇದೀಗ ತಮ್ಮ 67ನೇ ವಯಸ್ಸಿನಲ್ಲಿ ಉಮಾಶ್ರೀ ಅವರು ಯಕ್ಷಗಾನ ಪ್ರವೇಶ ಮಾಡುತ್ತಿದ್ದಾರೆ.
ಸ್ವತಃ ಕಲಾವಿದರಾಗಿ ಕಲಾವಿದರ ಬಗ್ಗೆ ಅಪಾರ ಅಭಿಮಾನಹೊಂದಿದ್ದ ಉಮಾಶ್ರೀ ಅವರು ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಆ ಅವಧಿಯಲ್ಲಿ ಕಲಾವಿದರ ಅನೇಕ ಸಮಸ್ಯೆಗಳಿಗೆ ಅವರು ಪರಿಹಾರ ಒದಗಿಸಿದ್ದರು. ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದ ಎಲ್ಲಾ ಕಡೆ ಸಂಚರಿಸಿ ಕಲಾವಿದರ ಅಳಲು ಆಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಗೌರವಧನ ವರ್ಗಾವಣೆ ಆಗುವಂತೆ ಮಾಡುವಲ್ಲಿ ಉಮಾಶ್ರೀ ಅವರ ಪಾತ್ರವಿದೆ.
ಸಚಿವರಾಗಿ ಅಧಿಕಾರ ಮುಗಿದ ನಂತರ ಉಮಾಶ್ರೀ ಅವರು ರಾಜಕೀಯವಾಗಿ ಸಕ್ರೀಯವಾಗಿರಲಿಲ್ಲ. ಅಭಿನಯ ಚಟುವಟಿಕೆಗಳಲ್ಲಿ ಸಹ ಅವರು ಹೆಚ್ಚಿಗೆ ಭಾಗವಹಿಸುತ್ತಿರಲಿಲ್ಲ. ಪ್ರಸ್ತುತ ಪೆರ್ಡೂರಿನ ಅನಂತಪದ್ಮನಾಭ ಯಕ್ಷಗಾನ ಮಂಡಳಿಯವರು ಉಮಾಶ್ರೀ ಅವರನ್ನು ಯಕ್ಷ ವೇದಿಕೆಗೆ ಆಮಂತ್ರಿಸಿದ್ದಾರೆ. ಇಲ್ಲಿ ನಡೆಯುವ `ರಾಮ ಪಟ್ಟಾಭಿಷೇಕ – ಮಾಯಮೃಗವತಿ’ ಯಕ್ಷಗಾನದಲ್ಲಿ ಉಮಾಶ್ರೀ ಅವರು ಮಂಥರೆಯ ಪಾತ್ರ ನಿಭಾಯಿಸಲಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕಾರ್ತಿಕ್ ಚಿಟ್ಟಾಣಿ, ಉದಯ್ ಹೆಗಡೆ, ಅಪ್ಟಣ್ಣ ಗೌಡ ಮಾಗೋಡು ಇನ್ನಿತರರು ಈ ಯಕ್ಷಗಾನದಲ್ಲಿ ಭಾಗವಹಿಸಲಿದ್ದಾರೆ.