ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಮತ್ತೆ ಮುಂದುವರೆದಿದೆ. ಕಾರವಾರ ಪಾದ್ರಿಭಾಗದ ಚಂದ್ರು ನಾಯ್ಕ ಹಾಗೂ ಶಿರಸಿಯ ಸುಲೇಮಾನ ಗಡ್ಡಿ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಚಂದ್ರು ನಾಯ್ಕ ಮಟ್ಕಾ ಬುಕ್ಕಿ ಸುಭಾಷ ಹರಿಕಂತ್ರರ ಹೆಸರು ಬಾಯ್ಬಿಟ್ಟಿದ್ದು, ಬುಕ್ಕಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸೋನಾರವಾಡ ಪೋರ್ಟ ಕಾಲೋನಿಯಲ್ಲಿ ಗೂಡಂಗಡಿ ನಡೆಸುವ ಚಂದ್ರು ನಾಯ್ಕ ಮಟ್ಕಾ ಆಡಿಸುತ್ತಿದ್ದಾಗ ಪಿಎಸ್‌ಐ ಮಂಜೇಶ್ವರ ಚಂದಾವರ ದಾಳಿ ನಡೆಸಿದರು. ಆ ವೇಳೆ ಮಟ್ಕಾ ಸಾಮಗ್ರಿ ಜೊತೆ ಜನರಿಂದ ಸಂಗ್ರಹಿಸಿದ 2390ರೂ ಸಿಕ್ಕಿದೆ. ವಿಚಾರಣೆ ವೇಳೆ ಚಂದ್ರು ನಾಯ್ಕ `ತಾನು ಕಮಿಷನ್ ಆಸೆಗೆ ಈ ಆಟ ಆಡಿಸುತ್ತಿದ್ದು, ಈ ಹಣವೆಲ್ಲ ಬೈತಖೋಲ್‌ದ ಸುಭಾಷ ಹರಿಕಂತ್ರಗೆ ಹೋಗುತ್ತದೆ’ ಎಂದಿದ್ದಾರೆ. ಈ ಹಿನ್ನಲೆ ಸುಭಾಷ ಹರಿಕಂತ್ರ ವಿರುದ್ಧವೂ ತನಿಖೆ ನಡೆಯುತ್ತಿದೆ.
ಶಿರಸಿ ಕಸ್ತೂರಿಬಾ ನಗರದ ಸುಪಾ ಮಸೀದಿ ಬಳಿಯ ಸುಲೇಮಾನ ಗಡ್ಡಿ ಮಾರಿಕಾಂಬಾ ಕ್ರೀಡಾಂಗಣದ ಅಕ್ಕ-ಪಕ್ಕ ಮಟ್ಕಾ ಆಡಿಸುವಾಗ ಪಿಎಸ್‌ಐ ರತ್ನಾ ಕುರಿ ದಾಳಿ ನಡೆಸಿದ್ದಾರೆ. ಆಗ ಸುಲೇಮಾನ್ ಬಳಿ ಜನರಿಂದ ಸಂಗ್ರಹಿಸಿದ 1050ರೂ ಹಣ ಸಿಕ್ಕಿದೆ. ಕೈ ಸನ್ನೆ ಮೂಲಕ ಜನರನ್ನು ಕರೆದು ಮಟ್ಕಾ ಆಡಿಸುವಂತೆ ಪ್ರೇರೇಪಿಸಿ ಹಣ ಪಡೆದ ಕಾರಣ ಸುಲೇಮಾನ ಗಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.




