ಮರದಿಂದ ತಾಜಾ ಇಳಿಸಿದ ಜೇನುತುಪ್ಪ ಎಂದು ಬಿಂಬಿಸಿ ಕೆಮಿಕಲ್ ಮಿಶ್ರಣದ ಸಿಹಿ ಮಾರಾಟ ಮಾಡುತ್ತಿದ್ದವರನ್ನು ಅಂಕೋಲಾದ ಜನ ಬೆಂಡೆತ್ತಿದ್ದಾರೆ.
ಅಂಕೋಲಾ ಕುಂಬರಕೇರಿ ರಸ್ತೆಯ ಮರವೊಂದಕ್ಕೆ ಜೇನು ಕುಟುಂಬವೊoದು ಗೂಡು ಕಟ್ಟಿತ್ತು. ಬಿಹಾರ ಮೂಲದ ಒಂದಷ್ಟು ಹುಡುಗರು ಇದನ್ನು ನೋಡಿದ್ದರು. ಶುಕ್ರವಾರ ಆ ಮರದಲ್ಲಿದ್ದ ಜೇನುಹುಳಕ್ಕೆ ಬೆಂಕಿ ಹಾಕಿದ ಆ ದುಷ್ಕರ್ಮಿಗಳು `ಈಗ ತಾನೇ ತೆಗೆದ ತುಪ್ಪ’ ಎಂದು ಬಿಂಬಿಸಿ ಪ್ರತಿ ಕೆಜಿಗೆ 600ರೂ ದರದಲ್ಲಿ ದ್ರಾವಣ ಮಾರಾಟ ಮಾಡುತ್ತಿದ್ದರು. ಸುಮಾರು 50 ಕೆಜಿ ಮೀರಿ ವ್ಯಾಪಾರವಾದರೂ ಅವರಲ್ಲಿದ್ದ ಜೇನುತುಪ್ಪ ಖಾಲಿ ಆಗಿರಲಿಲ್ಲ!
ಒಂದು ಜೇನುಗೂಡಿನಿಂದ ಈ ಪ್ರಮಾಣದಲ್ಲಿ ಜೇನು ತುಪ್ಪ ಸಿಕ್ಕಿರುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದರು. ಜೇನುತುಪ್ಪ ಖಾಲಿ ಆದ ಹಾಗೇ ಬೇರೆ ಕಡೆಯಿಂದ ಅದನ್ನು ತರುತ್ತಿರುವುದನ್ನು ಪತ್ತೆ ಮಾಡಿದರು. ಬಿಹಾರಿಗಳ ಬೆನ್ನತ್ತಿ ಹೋದ ಸ್ಥಳೀಯರಿಗೆ ಅನತಿ ದೂರದಲ್ಲಿ ರಿಕ್ಷಾವೊಂದು ಕಂಡಿದ್ದು, ಅಲ್ಪ ಪ್ರಮಾಣದ ಜೇನುತುಪ್ಪಕ್ಕೆ ಅಪಾರ ಪ್ರಮಾಣದಲ್ಲಿ ಕೆಮಿಕಲ್ ದ್ರಾವಣ ಬೆರೆಸುತ್ತಿರುವುದು ಕಾಣಿಸಿತು. ಅದನ್ನು ಮತ್ತೆ ಜೇನು ಮರದ ಅಡಿ ತಂದು ಸ್ವಾಭಾವಿಕವಾಗಿ ಸಿದ್ಧವಾದ ಜೇನು ತುಪ್ಪ ಎಂದು ಬಿಂಬಿಸಿ ಮಾರುತ್ತಿದ್ದರು.
ಈ ಬಗ್ಗೆ ಕುಂಬಾರಕೇರಿಯ ಪ್ರದೀಪ ನಾಯ್ಕ ಪೊಲೀಸರಿಗೆ ತಿಳಿಸಿದರು. ಪೋಲಿಸ್ ಸಿಬ್ಬಂದಿ ಆಶಿಪ್ ಕುಂಕುರ, ಶ್ರೀಕಾಂತ ಕಟಬರ ಜೊತೆ ಒಂದಷ್ಟು ಯುವಕರು ರಿಕ್ಷಾ ಸುತ್ತ ಜಮಾಯಿಸಿ ಬಿಹಾರಿಗಳ ಕಳ್ಳ ವ್ಯಾಪಾರಕ್ಕೆ ಕಡ್ಡಿ ಮಾಡಿದರು. `ತಾವು ಖರೀದಿಸಿದ ಜೇನುತುಪ್ಪ ಅಸಲಿಯಲ್ಲ’ ಎಂದು ಅರಿತ ಮಹಿಳೆಯರು ಅಲ್ಲಿಗೆ ಬಂದು ಕಳ್ಳ ವ್ಯಾಪಾರಿಗಳನ್ನು ಜಾಡಿಸಿದರು. `ನಮ್ಮ ಹಣ ನಮಗೆ ಕೊಡಿ’ ಎಂದು ಪಟ್ಟು ಹಿಡಿದರು.
ನಿಜವಾದ ಜೇನುತುಪ್ಪ ಎಂಬು ಬಿಂಬಿಸಿ ಕೆಮಿಕಲ್ ಮಿಶ್ರಣ ಮಾರಾಟ ಮಾಡುತ್ತಿದ್ದವರಿಗೆ ಕೆಲವರು ಕೊರಳ ಪಟ್ಟಿ ಹಿಡಿದು ಪ್ರಶ್ನಿಸಿದರು. ಮೋಸ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಇನ್ನು ಕೆಲವರು ಎರಡು ಏಟು ಬಾರಿಸಿದರು. ಪುರಸಭೆ ಆರೋಗ್ಯಾಧಿಕಾರಿ ವಿಷ್ಣು ಗೌಡ ಆಗಮಿಸಿ ಕೆಮಿಕಲ್ ಮಿಶ್ರಣದ ಜೇನುತುಪ್ಪದ ಮಾದರಿ ಪಡೆದರು. ಇದನ್ನು ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರಕ್ಕೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.