ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ `ಶಕ್ತಿ ಯೋಜನೆ’ ಭಾರೀ ಪ್ರಮಾಣದಲ್ಲಿ ಯಶಸ್ಸು ಪಡೆದಿದೆ. ಆದರೆ, ಕೆಲ ಸರ್ಕಾರಿ ಬಸ್ಸಿನ ಸಿಬ್ಬಂದಿ ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಅಲ್ಲಲ್ಲಿ ಪುರುಷ ಪ್ರಯಾಣಿಕರಿಗೂ `ಉಚಿತ ಮಹಿಳಾ ಪ್ರಯಾಣದ ಟಿಕೆಟ್’ ನೀಡುತ್ತಿದ್ದಾರೆ!
ಕರ್ನಾಟಕದ ಮಹಿಳೆಯರಿಗೆ ರಾಜ್ಯದ ಎಲ್ಲಡೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ನಡೆಸಲು ಸರ್ಕಾರ `ಶಕ್ತಿ’ ಯೋಜನೆ ಜಾರಿಗೆ ತಂದಿದೆ. ಸೂಚಿಸಿದ ಬಸ್ಸುಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರಿಗೆ ಬಸ್ಸಿನ ನಿರ್ವಾಹಕರು `ಶಕ್ತಿ ಯೋಜನೆಯ ಉಚಿತ ಪ್ರಯಾಣದ ಚೀಟಿ’ ಎಂಬ ಟಿಕೆಟ್ ಕೊಡುತ್ತಾರೆ. ಈ ಹಣವನ್ನು ಸರ್ಕಾರ ಸಾರಿಗೆ ನಿಗಮಕ್ಕೆ ಪಾವತಿಸುತ್ತದೆ. ಆದರೆ, ಅನಕ್ಷರಸ್ತ ಪ್ರಯಾಣಿಕರಿಂದ ಕೆಲ ಬಸ್ ನಿರ್ವಾಹಕರು ಕಾಸುಪಡೆದು ಮಹಿಳೆಯರಿಗೆ ನೀಡಬೇಕಾಗಿರುವ `ಉಚಿತ ಪ್ರಯಾಣದ ಚೀಟಿ’ ಕೊಡುತ್ತಿದ್ದಾರೆ.
ಅಂಕೋಲಾದಿoದ ಯಲ್ಲಾಪುರಕ್ಕೆ ಬರುವ ವ್ಯಕ್ತಿಯೊಬ್ಬರಿಗೆ ಕೆಲ ದಿನಗಳ ಹಿಂದೆ ಈ ಅನುಭವವಾಗಿದೆ. ಕಿರವತ್ತಿಯ ಪ್ರಯಾಣಿಕರೊಬ್ಬರು ಈ ರೀತಿ ಆದ ಬಗ್ಗೆ ದೂರಿದ್ದಾರೆ. ಕಾರವಾರ-ಅಂಕೋಲಾ ಬಸ್ ಸಂಚಾರ ಮಾರ್ಗದಲ್ಲಿಯೂ ಪುರುಷರೊಬ್ಬರಿಗೆ ಮಹಿಳಾ ಪ್ರಯಾಣಿಕರ ಚೀಟಿ ನೀಡಿ ಹಣ ಪಡೆದ ಆರೋಪವಿದೆ. ಓದು-ಬರಹ ಬಾರದ ಪುರುಷ ಪ್ರಯಾಣಿಕರ ಜೊತೆ ಅತ್ಯಂತ ಸೌಜನ್ಯದಿಂದಲೇ ಮಾತನಾಡುವ ನಿರ್ವಾಹಕರೊಬ್ಬರು ಅವರ ಜೊತೆಯಲ್ಲಿಯೇ ಕುಳಿತು ಕವಳ ಹಾಕಿ, ಕೊನೆಗೆ ಕಾಸು ಪಡೆದು `ಮಹಿಳಾ ಪ್ರಯಾಣಿಕರ ಚೀಟಿ’ ಕೊಡುತ್ತಿರುವ ಆರೋಪ ವ್ಯಕ್ತವಾಗಿದೆ.
ಆ ಅನಕ್ಷರಸ್ತರು ಮನೆಗೆ ಮರಳಿದ ನಂತರ ಅವರ ಜೇಬಿನಲ್ಲಿದ್ದ ಬಸ್ ಟಿಕೆಟ್ ನೋಡಿದ ಕುಟುಂಬದವರು ಈ ವಿಷಯ ಅರಿತು ಗ್ಯಾರಂಟಿ ಸಮಿತಿಯವರಿಗೂ ಸುದ್ದಿ ಮುಟ್ಟಿಸಿದ್ದಾರೆ. ಈ ವಿಷಯ ಶನಿವಾರ ಯಲ್ಲಾಪುರದಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯಲ್ಲಿಯೂ ಚರ್ಚೆಯಾಗಿದ್ದು, ಸಾರಿಗೆ ನಿಗಮದವರು ಇದನ್ನು ಅಲ್ಲಗಳೆದಿದ್ದಾರೆ. `ಅದಾಗಿಯೂ ಈ ಬಗ್ಗೆ ಎಚ್ಚರಿಕೆವಹಿಸಬೇಕು’ ಎಂದು ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಅವರು ಸೂಚನೆ ನೀಡಿದ್ದಾರೆ.
`ಪುರುಷ ಪ್ರಯಾಣಿಕರಿಗೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣ ಚೀಟಿ ನೀಡುವ ಸಾಧ್ಯತೆ ಕಡಿಮೆ. ಅದಾಗಿಯೂ ಈ ಬಗ್ಗೆ ಸದಸ್ಯರಿಗೆ ದೂರು ಬಂದ ಹಿನ್ನಲೆ ವಿಷಯ ಪ್ರಸ್ತಾಪಿಸಿದ್ದು, ಸರ್ಕಾರಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಸಹಿಸುವುದಿಲ್ಲ. ಅಂಥ ದೂರುಗಳಿದ್ದರೆ ಸಾರ್ವಜನಿಕರು ಸಮಿತಿ ಗಮನಕ್ಕೆ ತರಬೇಕು. ತಪ್ಪು ಮಾಡಿ ಸಿಕ್ಕಿಬಿದ್ದರೆ ಸರ್ಕಾರಿ ನೌಕರರು ಅಮಾನತಾಗುವುದು ಖಚಿತ’ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ತಿಳಿಸಿದರು.