ಉತ್ತರ ಕನ್ನಡ ಜಿಲ್ಲೆಯ ಉಪತಹಶೀಲ್ದಾರರು ಹಾಗೂ ಶಿರಸ್ತೇದಾರರೆಲ್ಲರೂ ಸೇರಿ ಹೊಸದೊಂದು ಸಂಘ ರಚಿಸಿದ್ದಾರೆ. ಈ ಸಂಘದ ಅಧ್ಯಕ್ಷರಾಗಿ ಗೋಕರ್ಣದ ಉಪತಹಶೀಲ್ದಾರ್ ಟಿ ಎಸ್ ಗಾಣಿಗೇರ್ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಕುಮಟಾದಲ್ಲಿ ನೂತನ ಸಂಘ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕುಮಟಾ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಜಗದೀಶ ಪೂಜಾರಿ ಅವರು ನೂತನ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಇದರೊಂದಿಗೆ ಕಾರವಾರದ ಕಿನ್ನರದ ಉಪತಹಶೀಲ್ದಾರ್ ಶ್ರೀಧರ ನಾಯ್ಕ ಅವರು ರಾಜ್ಯ ಪರಿಷತ್ ಸದಸ್ಯರಾಗಿ ಹಾಗೂ ಸಿದ್ದಾಪುರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಜಿ ಎಲ್ ಶ್ಯಾಮಸುಂದರ ಅವರು ಜಿಲ್ಲಾ ಸಂಘದ ಖಜಾಂಚಿಯಾಗಿ ಆಯ್ಕೆಯಾದರು.
ಜಿಲ್ಲಾ ಮಟ್ಟದ ಈ ಸಂಘದಲ್ಲಿ ಒಟ್ಟು 61 ಸದಸ್ಯರಿದ್ದಾರೆ. ಇನ್ನೂ ರಾಜ್ಯ ಮಟ್ಟದಲ್ಲಿಯೂ ಉಪತಹಶೀಲ್ದಾರರು ಹಾಗೂ ಶಿರಸ್ತೇದಾರರೆಲ್ಲರೂ ಸೇರಿ ಸಂಘ ರಚಿಸುವ ಬಗ್ಗೆ ನಿರ್ಧರಿಸಲಾಗಿದೆ. ಫೆ 2ರಂದು ಜಿಲ್ಲಾ ಸಂಘದ ಪದಾಧಿಕಾರಿಗಳೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರಿ ರಾಜ್ಯಮಟ್ಟದ ಸಂಘ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ.
ವರ್ಗಾವಣೆ, ಪದೋನ್ನತಿ, ಖಾಲಿ ಹುದ್ದೆಗಳ ಭರ್ತಿ ಆಗದಿರುವಿಕೆ, ಹುದ್ದೆ ಮೇಲ್ದರ್ಜೆಗೇರಿಸುವದಿರುವಿಕೆ ಸೇರಿ ಉಪತಹಶೀಲ್ದಾರ್ ಹಾಗೂ ಶಿರಸ್ತೆದಾರರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹೊಸ ಸಂಘ ರಚನೆಯಾಗಿದೆ. ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧೀನದಲ್ಲಿಯೇ ಈ ಸಂಘವೂ ಕಾರ್ಯನಿರ್ವಹಿಸಲಿದೆ.