ಪ್ರಶಾಂತ ನಾಯ್ಕರ ಪ್ರೀತಿಗೆ ಮನಸೋತು ಮದುವೆಯಾಗಿದ್ದ ಪ್ರಜ್ಞಾ ನಾಯ್ಕ ಅವರು ನಂತರ ಆತನ ವರ್ತನೆಯಿಂದ ಬೇಸತ್ತು ವಿಚ್ಚೇದನ ಪಡೆದಿದ್ದರು. ಅದಾಗಿಯೂ ಪ್ರಜ್ಞಾ ಅವರ ಬೆನ್ನು ಬಿದ್ದಿದ್ದ ಪ್ರಶಾಂತ ನಾಯ್ಕ ಪತ್ನಿ ಜೊತೆಗಿಲ್ಲದ ಕೊರಗಿನಲ್ಲಿ ಅವರ ಮನೆ ಹಿಂದಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ!
ಅಂಕೋಲಾ ತಾಲೂಕಿನ ಹಾರವಾಡದ ಪ್ರಶಾಂತ ನಾಯ್ಕ ಚಾಲಕರಾಗಿದ್ದರು. ಅವರ್ಸಾ ಕಾತ್ಯಾಯನಿ ದೇವಾಲಯ ಬಳಿಯ ಪ್ರಜ್ಞಾ ನಾಯ್ಕ ಅವರನ್ನು ಪ್ರಶಾಂತ ನಾಯ್ಕ ಪ್ರೀತಿಸುತ್ತಿದ್ದರು. ಪ್ರಜ್ಞಾ ನಾಯ್ಕರ ಮುಂದೆ ಪ್ರೀತಿಯನ್ನು ನಿವೇದಿಸಿ ಅವರ ಮನ ಗೆದ್ದಿದ್ದರು. ಅದರ ಪ್ರಕಾರ 17 ವರ್ಷಗಳ ಹಿಂದೆ ಅವರಿಬ್ಬರ ಮದುವೆ ನಡೆದಿತ್ತು. ಆದರೆ, ಕ್ರಮೇಣ ಪ್ರಶಾಂತ ನಾಯ್ಕ ಬದಲಾದರು. ಸರಾಯಿ ಕುಡಿಯುವುದನ್ನು ಸಹ ರೂಢಿಸಿಕೊಂಡರು.
ಪ್ರಶಾoತ ನಾಯ್ಕರ ವರ್ತನೆಯಿಂದ ಬೇಸತ್ತ ಪ್ರಜ್ಞಾ ನಾಯ್ಕ ವಿವಾಹ ವಿಚ್ಚೇದನ ಪಡೆದರು. ತವರುಮನೆಗೆ ಬಂದು ಅಲ್ಲಿಯೇ ವಾಸವಾದರು. ವಿವಾಹ ವಿಚ್ಚೇದನ ಪಡೆದಿದ್ದರೂ ಪ್ರಶಾಂತ ನಾಯ್ಕ ಪ್ರಜ್ಞಾ ಅವರನ್ನು ಬಿಟ್ಟಿರಲಿಲ್ಲ. ಆಗಾಗ ಅವರ ತವರುಮನೆಗೆ ಬಂದು ಪೀಡಿಸುತ್ತಿದ್ದರು. ಕೆಲಸಕ್ಕೆ ಹೋಗದೇ ಅಲ್ಲಿ ಇಲ್ಲಿ ಅಲೆದಾಡುವುದನ್ನು ರೂಢಿಸಿಕೊಂಡಿದ್ದರು. ಅನಗತ್ಯ ತೊಂದರೆ ಕೊಡುತ್ತಿರುವ ಬಗ್ಗೆ ಪ್ರಜ್ಞಾ ನಾಯ್ಕ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದರು.
ಕೌಟುಂಬಿಕ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಪ್ರಶಾಂತ ನಾಯ್ಕ ಶನಿವಾರ ಸಹ ಪ್ರಜ್ಞಾ ಅವರ ಮನೆ ಬಳಿ ಬಂದಿದ್ದರು. ಅಲ್ಪ ಕಾಲ ಗಲಾಟೆ ನಡೆಸಿದ ನಂತರ ಪ್ರಜ್ಞಾ ಅವರ ತವರುಮನೆ ಹಿಂದಿನ ಮಾವಿನ ಮರ ಏರಿದರು. ಅಲ್ಲಿಯೇ ಅವರು ನೇಣಿಗೆ ಶರಣಾಗಿ ಸಾವನಪ್ಪಿದರು.