ವರ್ಷದ ಬಹುಪಾಲು ದಿನ ತುಂಬಿ ಹರಿಯುವ ಯಲ್ಲಾಪುರದ ಆರತಿಬೈಲ್ ಅಂಚಿನ ಹಳ್ಳಕ್ಕೆ ಕೆಮಿಕಲ್ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಳ್ಳದ ನೀರು ಕಲುಷಿತಗೊಂಡಿದ್ದು, ಭಾನುವಾರ ಬೆಳಗ್ಗೆಯಿಂದ ಇಲ್ಲಿ ಭಾರೀ ಪ್ರಮಾಣದ ನೊರೆ ಉಕ್ಕಿ ಬರುತ್ತಿದೆ.
ಹಳ್ಳದ ನೀರಿನಲ್ಲಿ ನೊರೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಯಕ್ಕೆ ರವಾನಿಸಿದರು. `ಇಡಗುಂದಿ, ಗರವಾಸ, ಚಿನ್ನಪುರ, ದೋಣಗಾರ ಸೇರಿ ಹಲವು ಊರುಗಳಿಗೆ ಈ ಹಳ್ಳದ ನೀರಿನ ಹರಿವಿದ್ದು, ಯಾವುದೇ ಕಾರಣಕ್ಕೂ ಈ ನೀರನ್ನು ಬಳಸಬೇಡಿ’ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ ಅವರು ತುರ್ತು ಸಂದೇಶ ರವಾನಿಸಿದ್ದಾರೆ. ಜಾನುವಾರುಗಳ ಬಳಕೆಗೆ ಸಹ ಈ ನೀರು ಉಪಯೋಗಿಸದಂತೆ ಡಾ ನರೇಂದ್ರ ಪವಾರ್ ಅವರು ಕೋರಿದ್ದಾರೆ.
ಆರತಿಬೈಲ್ ಕ್ರಾಸಿನ ಪಕ್ಕ ಒಂದು ಝರಿಯಿದೆ. ಅಲ್ಲಿಂದ ಈ ಹಳ್ಳ ಮುಂದೆ ಸಾಗುತ್ತದೆ. ಪ್ರಸ್ತುತ ಹಳ್ಳದ ನೀರಿನ ವಾಸನೆಯೂ ಬದಲಾಗಿದ್ದು, ಬಾಟಲಿಯಲ್ಲಿ ತುಂಬಿದಾಗ ರಾಡಿ ನೀರು ಕಾಣಿಸುತ್ತಿದೆ. ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಪರುಶರಾಮ ಡೊಣುರ, ಆರೋಗ್ಯ ಇಲಾಖೆ ಸಿಬ್ಬಂದಿ ವಿ ಎಲ್ ಶಿರೂರ ಸೇರಿ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚನ್ನವೀರಪ್ಪಾ ಕಂಬಾರ ಸಹ ನೀರಿನ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಹೆದ್ದಾರಿ ಮೂಲಕ ಸಂಚರಿಸುವ ವಾಹನ ಕೆಮಿಕಲ್ ತ್ಯಾಜ್ಯವನ್ನು ಇಲ್ಲಿ ಬಿಟ್ಟಿರುವ ಅನುಮಾನವಿದ್ದು, ಈ ಬಗ್ಗೆ ಖಚಿತವಾಗಿಲ್ಲ.